ಚಿತ್ರದುರ್ಗ: ಕಾಲಾವಕಾಶ ಕಡಿಮೆ ಇದೆ. ಇರುವ ಸಮಯವನ್ನೇ ಬಳಸಿಕೊಂಡು ನಗರದ ನಾಗರೀಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ನಗರಸಭೆ ನೂತನ ಅಧ್ಯಕ್ಷ ಹೆಚ್.ತಿಮ್ಮಣ್ಣ ಭರವಸೆ ನೀಡಿದರು.
ಜಿ.ಪಂ.ಸಭಾಂಗಣದಲ್ಲಿ ಗುರುವಾರ ನಗರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹೆಚ್.ತಿಮ್ಮಣ್ಣನವರು ನಗರಸಭೆಯಲ್ಲಿ ಶುಕ್ರವಾರ ಅಭಿಮಾನಿಗಳು ಹಾಗೂ ಸಿಬ್ಬಂದಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಜನತೆಗೆ ಶುದ್ದವಾದ ಕುಡಿಯುವ ನೀರು ಪೂರೈಸುವುದು ಸೇರಿದಂತೆ ಗುಣಮಟ್ಟದ ರಸ್ತೆ ನಿರ್ಮಾಣ, ಬೀದಿ ದೀಪ ಅಳವಡಿಕೆ, ಸ್ವಚ್ಚತೆಗೆ ಮೊದಲ ಆದ್ಯತೆ ನೀಡುತ್ತೇನೆ. ಪಕ್ಷಭೇದ ಮರೆತು ನಗರಸಭೆಯ ಎಲ್ಲಾ ೩೫ ವಾರ್ಡ್‌ಗಳ ಸದಸ್ಯರು ನನ್ನ ಮೇಲೆ ಅಭಿಮಾನವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಎಲ್ಲರ ಸಹಕಾರ ಪಡೆದು ನಗರದ ಅಭಿವೃದ್ದಿ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ವಾಗ್ದಾನ ಮಾಡಿದ ಅಧ್ಯಕ್ಷ ಹೆಚ್.ತಿಮ್ಮಣ್ಣ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಜೆಡಿಎಸ್.ಜಿಲ್ಲಾ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ ನೂತನ ಅಧ್ಯಕ್ಷರಿಗೆ ಶಾಲು ಹಾರ ಹಾಕಿ ಅಭಿನಂದಿಸಿದರು.
ನಗರಸಭೆ ಸದಸ್ಯರುಗಳಾದ ತಿಪ್ಪೇಸ್ವಾಮಿ, ಸಿ.ಟಿ.ರಾಜೇಶ್, ಎಸ್.ಬಿ.ಎಲ್.ಮಲ್ಲಿಕಾರ್ಜುನ್, ರಾಘವೇಂದ್ರ(ಈರುಳ್ಳಿ), ನಗರಸಭೆ ವ್ಯವಸ್ಥಾಪಕ ಹಾಗೂ ಆರೋಗ್ಯ ನಿರೀಕ್ಷಕರುಗಳಾದ ಸರಳ, ಭಾರತಿ ಈ ಸಂದರ್ಭದಲಿ ಹಾಜರಿದ್ದರು.