ಚಿತ್ರದುರ್ಗ : ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಗಿತಗೊಂಡಿದ್ದ ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವ್ಯಾಪಾರ ವಹಿವಾಟನ್ನು ಹಲವು ಷರತ್ತಿಗೆ ಒಳಪಟ್ಟು ಏ. 01 ರಿಂದ ಪ್ರಾರಂಭಿಸಲು ಎಪಿಎಂಸಿ ತೀರ್ಮಾನಿಸಿದೆ ಎಂದು ಚಿತ್ರದುರ್ಗ ಎಪಿಎಂಸಿ ಕಾರ್ಯದರ್ಶಿ ತಿಳಿಸಿದ್ದಾರೆ.

ಚಿತ್ರದುರ್ಗ ಎಪಿಎಂಸಿ ಯಲ್ಲಿ ವ್ಯಾಪಾರ ವಹಿವಾಟು ಪ್ರಾರಂಭಿಸುವ ಕುರಿತು ಸಮಿತಿ ಸಭಾಂಗಣದಲ್ಲಿ ಮಂಗಳವಾರ ಎಪಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾಧಕ ಬಾಧಕಗಳ ಕುರಿತು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಳಿಕ ಎಪಿಎಂಸಿ ನಲ್ಲಿ ವ್ಯಾಪಾರ ವಹಿವಾಟನ್ನು ಷರತ್ತಿಗೊಳಪಟ್ಟು ಏ. 01 ರಿಂದ ಪ್ರಾರಂಭಿಸಲು ನಿರ್ಣಯ ಕೈಗೊಳ್ಳಲಾಗಿದೆ.

ರೈತರು ತಮ್ಮ ಕೃಷಿ ಹುಟ್ಟುವಳಿಗಳನ್ನು ಮಾರಾಟಕ್ಕೆ ತರುವ ಯಾವುದೇ ವಾಹನವನ್ನು ತಡೆಯುವುದಿಲ್ಲ.  ವ್ಯಾಪಾರದ ನಂತರ ರೈತರು ತಮ್ಮ ವಾಹನದಲ್ಲಿಯೇ ಹಿಂದಿರುಗಬೇಕು ಅಥವಾ ಪೇಟೆ ಕಾರ್ಯಕರ್ತರಿಂದ ಪಡೆದ ಬಿಲ್ಲನ್ನು ಪೊಲೀಸ್ ಅಧಿಕಾರಿಗಳಿಗೆ ತೋರಿಸಿ ತಮ್ಮ ಊರಿಗೆ ಹಿಂದಿರುಗಬಹುದು.  ಇದಕ್ಕಾಗಿ ರೈತರು ಪಹಣಿ ಹಾಗೂ ಆಧಾರ್ ಕಾರ್ಡ್ ತಮ್ಮ ಜೊತೆಯಲ್ಲಿ ತರುವುದು ಉತ್ತಮ.

ಎಪಿಎಂಸಿ ನಲ್ಲಿ ವ್ಯಾಪಾರ ನಡೆಸಲು ಇಚ್ಛಿಸುವ ಪೇಟೆ ಕಾರ್ಯಕರ್ತರುಗಳಿಗೆ ಸಮಿತಿಯಿಂದ ಪಾಸ್ ನೀಡಲಾಗುವುದು.  ಇದಕ್ಕಾಗಿ ಲೈಸೆನ್ಸ್ ಪ್ರತಿ, 01 ಫೋಟೋ, ಮೊಬೈಲ್ ಸಂಖ್ಯೆ ನೀಡಬೇಕು.  ಮಾರುಕಟ್ಟೆ ಪ್ರಾಂಗಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೈಸೆನ್ಸ್ ಪಡೆದ ಹಮಾಲರು ಕೂಡ ಸಮಿತಿಯಿಂದ ಪಾಸ್ ಪಡೆಯಬೇಕು.

ಲೈಸೆನ್ಸ್ ಪಡೆಯದೆ ಇರುವ ಬೇರೆ ಹಮಾಲರು ಆಯಾ ಪೇಟೆ ಕಾರ್ಯಕರ್ತರುಗಳ ಬಳಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ ಪಡೆದು, ಫೋಟೋ, ಮೊಬೈಲ್ ಸಂಖ್ಯೆ ನೀಡಿ ತಾತ್ಕಾಲಿಕ ಪಾಸ್ ಪಡೆಯಬಹುದು.

ವ್ಯಾಪಾರದ ನಂತರ ಪೇಟೆ ಕಾರ್ಯಕರ್ತರುಗಳು ಕೃಷಿ ಹುಟ್ಟುವಳಿಗಳನ್ನು ರವಾನಿಸಲು ಇಚ್ಛಿಸಿದಲ್ಲಿ ಸಂಬಂಧಿಸಿದ ಹುಟ್ಟುವಳಿಗೆ ಪರ್ಮಿಟ್ ಮತ್ತು ಬಿಲ್ ಹಾಕಿಕೊಂಡು ಸಮಿತಿಯಿಂದ ಪಾಸ್ ಪಡೆದು ವಾಹನವನ್ನು ಬೇರೆಡೆಗೆ ರವಾನಿಸಬಹುದು.

ಮಾರುಕಟ್ಟೆ ಪ್ರಾಂಗಣದಲ್ಲಿರುವ ಪೇಟೆ ಕಾರ್ಯಕರ್ತರುಗಳು ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಅಂಗಡಿಗಳಲ್ಲಿ ಸ್ಯಾನಿಟೈಜರ್, ಹ್ಯಾಂಡ್‍ವಾಶ್, ನೀರು, ಮಾಸ್ಕ್ ಬಳಕೆ ಸೇರಿದಂತೆ ಎಲ್ಲ ಬಗೆಯ ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಕೈಗೊಳ್ಳಬೇಕು, ಅಲ್ಲದೆ ಅಂಗಡಿಗಳಲ್ಲಿ ಜನ ಜಂಗುಳಿ ಮಾಡಿಕೊಳ್ಳದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಬೇಕು.  ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

ಯಾವುದೇ ಗೊಂದಲಗಳು ಇದ್ದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗಮನಕ್ಕೆ ತಂದು ಸೂಕ್ತ ಪರಿಹಾರ ಕಂಡುಕೊಳ್ಳುವುದರೊಂದಿಗೆ ಸುಗಮವಾಗಿ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಎಪಿಎಂಸಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.