ಚಳ್ಳಕೆರೆ- ನಗರದ ಗ್ರಾಮದೇವರಾದ ಶ್ರೀ ವೀರಭದ್ರಸ್ವಾಮಿಯ ರಥೋತ್ಸವ ಸಂಭ್ರಮ ಸಗಡಗರಗಳಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಚುನಾವಣೆ ಪ್ರಯುಕ್ತ ಪಕ್ಷದ ಬಹುತೇಕ ಅಭ್ಯರ್ಥಿಗಳು ರಥೋತ್ಸವಕ್ಕೆ ಆಗಮಿಸಿ ಶ್ರೀಸ್ವಾಮಿಯ ದರ್ಶನದೊಂದಿಗೆ ಮತದಾರರ ದರ್ಶನವನ್ನು ಸಹ ಪಡೆದರು. ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಇಲಾಖೆ ಹಾಗೂ ಭಕ್ತರ ಸಹಕಾರದಿಂದ ಯಾವುದೇ ಲೋಪವಾಗದಂತೆ ದೇವರ ಕಾರ್ಯವನ್ನು ನಡೆಸಿತು.
ಮಧ್ಯಾಹ್ನ ೪.೩೦ಕ್ಕೆ ಸರಿಯಾಗಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನಗಳನ್ನು ನಡೆಸಿ, ರಥೋತ್ಸವ ಮೂರು ಪ್ರದಕ್ಷಣೆ ಹಾಕಿದ ನಂತರ ಶ್ರೀಉತ್ಸವ ಮೂರ್ತಿಯನ್ನು ರಥದ ಪೀಠದಲ್ಲಿ ಸ್ಥಾಪಿಸಲಾಯಿತು. ಭಕ್ತರು ಶ್ರೀಸ್ವಾಮಿಯ ಜೈಕಾರವನ್ನು ಹಾಕಿದರು. ಈ ಸಂದರ್ಭದಲ್ಲಿ ಪದ್ದತಿಯಂತೆ ರಥೋತ್ಸವದ ಮುಕ್ತಿ ಭಾವುಟವನ್ನು ಹರಾಜು ಹಾಕಲಾಯಿತು. ನಗರದ ಗಂಧರ್ವ, ಭರಣಿ ಹೋಟೆಲ್ ಮಾಲೀಕ ಸದಾನಂದ ೬ ಲಕ್ಷ ರೂಗಳಿಗೆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಪಡೆದರು. ರಥೋತ್ಸವ ಎರಡೂ ಬಂದಿಯಲ್ಲಿ ಹಗ್ಗ ಕಟ್ಟಿ ಭಕ್ತರು ತೇರು ಎಳೆಯಲು ಪ್ರಾರಂಭಿಸಿದಾಗ ಭಕ್ತರ ಜೈಕಾರ ಮುಗಿಲು ಮುಟ್ಟಿತ್ತು. ಪುರಂತಪ್ಪ ಸಹ ತನ್ನದೇಯಾದ ವಿಶೇಷ ನಾಟ್ಯದಲ್ಲಿ ರಥ ಸಾಗುವ ಹಾದಿಯಲ್ಲಿ ನಡೆದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಮ್ಮ ಪತ್ನಿ ಯೊಂದಿಗೆ ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆದರು. ಬಿಜೆಪಿ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಸಹ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವ ಸಾಗುವ ಹಾದಿಯ ಉದ್ದಕ್ಕೂ ಎರಡೂ ಬದಿಯಲ್ಲಿ ಸೇರಿದ ಸಾವಿರ ಸಾವಿರ ಸಂಖ್ಯೆಯ ಭಕ್ತರು ದೇವರ ರಥೋತ್ಸವದ ಸಂತೋಷ ಕ್ಷಣವನ್ನು ಕಣ್ಮುಂಬಿಕೊಂಡರು. ಈ ಜಾತ್ರೆಯ ವಿಶೇಷವೆಂದರೆ ದೇವರ ಭಕ್ತರು ಎಲ್ಲೇ ಇರಲಿ ತಪ್ಪದೆ ಈ ರಥೋತ್ಸವಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಬೇರೆ ಊರುಗಳಿಗೆ ವಿವಾಹ ಮಾಡಿಕೊಟ್ಟ ಹೆಣ್ಣು ಮಕ್ಕಳನ್ನೂ ಸಹ ಪೋಷಕರು ಈ ಜಾತ್ರೆಯ ಸಂದರ್ಭದಲ್ಲಿ ಮನೆಗೆ ಕರೆಸಿಕೊಂಡು ರಥೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾರೆ. ರಥೋತ್ಸವ ಸಾಗುವ ರಸ್ತೆಯ ಉದ್ದದ ಮನೆಗಳ ಮೇಲೂ ಸಹ ಭಕ್ತರು ಹಾಜರಿದ್ದು ಶ್ರೀಸ್ವಾಮಿಗೆ ನಮನ ಸಲ್ಲಿಸಿದರು. ಪಾದಗಟ್ಟೆ ತನಕ ಸಾಗಿದ ರಥೋತ್ಸವ ಪುನಃ ದೇವಸ್ಥಾನದ ಬಳಿ ಬಂತು ನಿಂತಿತು.
ಧರ್ಮದರ್ಶಿ ಗುರುಸಿದ್ದನಗೌಡ, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಎ.ಆನಂತ ಪ್ರಸಾದ್, ಕೋಟೆ ಬಸವರಾಜು, ತಿಪ್ಪೇಸ್ವಾಮಿ, ನಾಗರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್ ಸೇರಿದಂತೆ ಅನೇಕರು ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದ ಅನೇಕ ವಾಣಿಜ್ಯೋದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳು ಶ್ರೀ ಸ್ವಾಮಿಯ ರಥೋತ್ಸವಕ್ಕೆ ಬೃಹದಾಕಾರದ ಪುಷ್ಟ ಹಾರಗಳನ್ನು ವಾದ್ಯಗಳ ಸಮೇತ ಮೆರವಣಿಗೆ ನಡೆಸಿ ರಥಕ್ಕೆ ಸಮರ್ಪಿಸಿದರು. ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಬೆಳಗಿನ ಜಾವ ಅಗ್ನಿ ಕುಂಡ ಕಾರ್ಯಕ್ರಮವನ್ನು ನಡೆಸಲಾಯಿತು ಇದರಲ್ಲೂ ಸಹ ಸಾವಿರಾರು ಜನರು ಭಾಗವಹಿಸಿ ತಮಗೆ ದೇವರ ಮೇಲೆ ಇರುವ ಭಕ್ತಿಯನ್ನು ಪ್ರದರ್ಶಿಸಿದರು.