ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ-೪ ಹೊರವಲಯ ದಾವಣಗೆರೆ ರಸ್ತೆಯಲ್ಲಿರುವ ಮಾದಾರ ಚನ್ನಯ್ಯಗುರುಪೀಠದ ಮುಂಭಾಗದಲ್ಲಿರುವ ಗ್ಯಾರೇಜ್ ಮೆಕ್ಯಾನಿಕ್‌ಗಳು ನಗರದಲ್ಲಿ ಸ್ಥಳಾವಕಾಶ ಮಾಡಿಕೊಡುವಂತೆ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದಿಂದ ಸುಮಾರು ನಾಲ್ಕು ಕಿ.ಮೀ.ದೂರದಲ್ಲಿ ಗ್ಯಾರೇಜ್‌ಗಳಿರುವುದರಿಂದ ದಿನನಿತ್ಯವೂ ಜೀವನಕ್ಕಾಗಿ ಪರದಾಡುವಂತಾಗಿದೆ. ಯಾವುದೇ ಬಗೆಯ ವಾಹನಗಳು ಅಪರೂಪಕ್ಕೊಮ್ಮೆ ನಮ್ಮ ಗ್ಯಾರೇಜ್‌ಗೆ ರಿಪೇರಿಗೆ ಬರುತ್ತವೆ. ಇಲ್ಲಿ ಯಾವುದೆ ರೀತಿಯ ಮೂಲ ಸೌಲಭ್ಯಗಳು ನಮಗೆ ಇಲ್ಲದಂತಾಗಿದೆ. ಆದ್ದರಿಂದ ನಗರದಲ್ಲಿ ಎಲ್ಲಿಯಾದರೂ ಗ್ಯಾರೇಜ್ ಇಟ್ಟುಕೊಳ್ಳಲು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಮೆಕ್ಯಾನಿಕ್‌ಗಳು ಒತ್ತಾಯಿಸಿದರು.
ಕುಡಿಯುವ ನೀರು, ವಿದ್ಯುತ್, ಶೌಚಾಲಯ ನಿರ್ಮಿಸಿಕೊಡುವಂತೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಇದುವರೆವಿಗೂ ಯಾವ ಸ್ಪಂದನೆಯೂ ಜಿಲ್ಲಾಡಳಿತದಿಂದ ಸಿಕ್ಕಿಲ್ಲ. ಮೆಕ್ಯಾನಿಕ್ ಕೆಲಸವನ್ನು ನಂಬಿಕೊಂಡು ಹತ್ತಾರು ವರ್ಷಗಳಿಂದಲೂ ಜೀವನ ಸಾಗಿಸುತ್ತಿದ್ದೇವೆ. ಇನ್ನಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಎಂದು ಪ್ರತಿಭಟನಾನಿರತರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.
ಕೆ.ಪಿ.ಸಿ.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರುಗಳಾದ ಮೋಕ್ಷರುದ್ರಸ್ವಾಮಿ, ಬಿ.ಜಿ.ಶ್ರೀನಿವಾಸ್, ಡಿ.ಎನ್.ಮೈಲಾರಪ್ಪ ಹಾಗೂ ಮೆಕ್ಯಾನಿಕ್‌ಗಳು ಈ ಸಂದರ್ಭದಲ್ಲಿ ಹಾಜರಿದ್ದರು