ಸಾಣೇಹಳ್ಳಿ: ಇಲ್ಲಿನ ಡಾ|| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಖ್ಯಾತ ಹಿರಿಯ ಸಾಹಿತಿ, ವಿಮರ್ಶಕ ಗಿರಡ್ಡಿ ಗೋವಿಂದರಾಜು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಗಿರಡ್ಡಿಯವರು ನಾಟಕ, ಸಾಹಿತ್ಯ, ಸಂಸ್ಕೃತಿ ಕುರಿತಂತೆ ನಿರಂತರವಾಗಿ ನಮ್ಮೊಂದಿಗೆ ಚರ್ಚಿಸುತ್ತಿದ್ದರು. ಅಲ್ಲದೆ ಸಾಣೇಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇತ್ತೀಚಿಗಷ್ಟೆ ಸಾಣೇಹಳ್ಳಿಯಲ್ಲಿ ನಡೆದ ವಚನಗಳ ಮರು ಓದು ಮತ್ತು ವಿಶ್ಲೇಷಣೆಯ ವಚನ ಕಮ್ಮಟ ಶಿಬಿರದ ನೇತೃತ್ವ ವಹಿಸಿ ಅವರು ನೀಡಿದ ಅರ್ಥಗರ್ಭಿತ ಉಪನ್ಯಾಸ ಈಗಲೂ ನಮ್ಮ ಕಣ್ಣಿಗೆ ಕಟ್ಟಿದಂತಿದೆ. ಅವರ ಆಕಸ್ಮಿಕ ನಿಧನ ನಮಗೆ ಆಘಾತ ತಂದಿದೆ. ಅವರ ನಿಧನದಿಂದಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿಯ ಲೋಕಕ್ಕೆ ನಿಜಕ್ಕೂ ನಷ್ಟವೇ ಸರಿ. ಬಸವಾದಿ ಶರಣರು ಮೃತರ ಆತ್ಮಕ್ಕೆ ಶಾಂತಿಯನ್ನು, ಕುಟುಂಬ ವರ್ಗಕ್ಕೆ ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ತಮ್ಮ ಸಂತಾಪ ಸೂಚಕ ನುಡಿಯಲ್ಲಿ ತಿಳಿಸಿದ್ದಾರೆ.