ಚಿತ್ರದುರ್ಗ: ಗಿಡ-ಮರಗಳನ್ನು ಬೆಳಸಿ ಪರಿಸರವನ್ನು ಸ್ವಚ್ಚಂದವಾಗಿಟ್ಟುಕೊಂಡರೆ ಸಕಾಲಕ್ಕೆ ಮಳೆಯಾಗಿ ಬೆಳೆ ಬರುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯಕ್ತ ಎಂ.ರೇವಣಸಿದ್ದಪ್ಪ ಮಕ್ಕಳಿಗೆ ತಿಳಿಸಿದರು.
ಐ.ಯು.ಡಿ.ಪಿ.ಲೇಔಟ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಹಯೋಗದೊಂದಿಗೆ ಮಂಗಳವಾರ ಸಸಿಗಳನ್ನು ನೆಟ್ಟು ಮಾತನಾಡಿದರು.
ಗಿಡ ಮರಗಳಿಂದ ಮಾತ್ರ ಮನುಷ್ಯನಿಗೆ ಶುದ್ದವಾದ ಗಾಳಿ ಸಿಗುತ್ತದೆ. ಪರಿಸರ ಹಸಿರಿನಿಂದ ಕೂಡಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಸಸಿಗಳನ್ನು ನೆಟ್ಟು ಸುಮ್ಮನಿರಬಾರದು. ದನ-ಕರು, ಮೇಕೆ ಕುರಿಗಳು ಗಿಡಗಳನ್ನು ಮೇಯದಂತೆ ನೋಡಿಕೊಂಡು ಜೋಪಾನ ಮಾಡಿದಾಗ ಮಾತ್ರ ಪರಿಸರಕ್ಕೆ ಏನಾದರೂ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಪರಿಸರದ ಮಹತ್ವವನ್ನು ತಿಳಿಸುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ. ಇದರಿಂದ ಶಾಲಾ ವಾತಾವರಣವನ್ನು ಶುಚಿಯಾಗಿಟ್ಟುಕೊಂಡಂತಾಗುತ್ತದೆ ಎಂದರು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಚಳ್ಳಕೆರೆ ಯರ್ರಿಸ್ವಾಮಿ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಮಕ್ಕಳು ರಾಷ್ಟ್ರಪತಿ ಪುರಸ್ಕಾರ ಪಡೆದುಕೊಂಡರೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣಕ್ಕೆ ಉಚಿತ ಸೀಟು ದೊರಕುತ್ತದೆ. ರಾಜ್ಯ ಪುರಸ್ಕಾರ ನಂತರ ರಾಷ್ಟ್ರಪತಿ ಪುರಸ್ಕಾರ ಪಡೆಯಿರಿ. ಬಹಳಷ್ಠು ಮಕ್ಕಳಿಗೆ ಈ ಅವಕಾಶವಿರುವುದು ಗೊತ್ತಿಲ್ಲ ಎಂದು ತಿಳಿಸಿದರು.
ಗಿಡ ನೆಡುವುದು ಮುಖ್ಯವಲ್ಲ. ನೆಟ್ಟ ಮೇಲೆ ಅದರ ಕಡೆ ಗಮನಕೊಟ್ಟು ಪ್ರತಿನಿತ್ಯವೂ ನೀರುಣಿಸಿ ಪೋಷಿಸಿ ದೊಡ್ಡಮರವನ್ನಾಗಿಸಿ. ಶುದ್ದ ಗಾಳಿಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ ಎಂದು ಮಕ್ಕಳಿಗೆ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡುತ್ತ ಪ್ರತಿಯೊಬ್ಬರು ನೆಟ್ಟ ಗಿಡವನ್ನು ಸಂರಕ್ಷಿಸಿ ದೊಡ್ಡ ಮರವನ್ನಾಗಿ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಿದಂತಾಗುತ್ತದೆ ಎಂದರು.
ಗೈಡ್ಸ್ ಜಿಲ್ಲಾ ಆಯುಕ್ತೆ ಸುನಿತಾಮಲ್ಲಿಕಾರ್ಜುನ್ ಮಾತನಾಡಿ ಶಾಲಾ ವಾತಾವರಣ ಹಸಿರಿನಿಂದ ಕಂಗೊಳಿಸಬೇಕಾದರೆ ಪ್ರತಿ ಮಕ್ಕಳು ಒಂದೊಂದು ಗಿಡಗಳನ್ನು ನೆಟ್ಟು ಸಂರಕ್ಷಿಸಿ ಪರಿಸರವನ್ನು ಕಾಪಾಡಬೇಕಾಗಿದೆ ಎಂದು ತಿಳಿಸಿದರು.
ರಾಜ್ಯ ಪ್ರತಿನಿಧಿ ಪ್ರಶಾಂತ್, ಎ.ಎಸ್.ಓ.ಸಿ.ಕರಿಸಿದ್ದಪ್ಪ, ಎ.ಡಿ.ಸಿ. ರೇವಣ್ಣ, ಗೈಡ್ಸ್ ಎ.ಡಿ.ಸಿ. ಶಶಿಕಲ ರವಿಶಂಕರ್, ಡಿ.ಟಿ.ಸಿ.ಸುಶೀಲ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪಿ.ವೈ.ದೇವರಾಜ್‌ಪ್ರಸಾದ್, ಹೆಚ್.ಕ್ಯೂ.ಸಿ.ನೂರ್‌ಫಾತಿಮ, ಮುಖ್ಯ ಶಿಕ್ಷಕಿ ಪುಷ್ಪಲತ, ಶಿಕ್ಷಕ ಹಾಗೂ ಶಿಕ್ಷಕಿಯರು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ವಿಶ್ವಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ್ದರು.