ಚಿತ್ರದುರ್ಗ: ಪರಿಸರದಲ್ಲಿ ಉಂಟಾಗುತ್ತಿರುವ ಅಸಮತೋಲನ ಹಾಗೂ ತಾಪಮಾನವನ್ನು ನಿಯಂತ್ರಿಸಲು ಪ್ರತಿಯೊಬ್ಬರು ಒಂದೊಂದು ಸಸಿ ನೆಡುವ ಮೂಲಕ ಪರಿಸರವನ್ನು ಕಾಪಾಡಬೇಕಾಗಿದೆ ಎಂದು ಡಾ.ಇರ್ಷಾದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜೋಗಿಮಟ್ಟಿ ರಸ್ತೆಯಲ್ಲಿರುವ ಶಂಕರಮಠದ ಸಮೀಪವಿರುವ ಪಿ.ವಿ.ಎಸ್.ಪ್ಯಾರಾಮೆಡಿಕಲ್ ಕಾಲೇಜು ಆವರಣದಲ್ಲಿ ಭಾನುವಾರ ಸಸಿ ನೆಡುವ ಮೂಲಕ ಗ್ರೀನ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನ ದುರಾಸೆಯಿಂದ ಗಿಡ ಮರಗಳು ನಾಶವಾಗುತ್ತಿವೆ. ಇದರಿಂದ ಪರಿಸರದಲ್ಲಿ ಏರುಪೇರಾಗಿ ಸಕಲ ಜೀವರಾಶಿಗಳು ತಾಪಮಾನದಿಂದ ತತ್ತಿರಿಸುತ್ತಿವೆ. ಸಕಾಲಕ್ಕೆ ಮಳೆ ಬೆಳೆಯಿಲ್ಲದೆ ರೈತಾಪಿ ವರ್ಗ ಕೂಡ ಮುಗಿಲು ನೋಡುವಂತಾಗಿದೆ. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳು ಪರಿಸರದ ಮಹತ್ವವನ್ನು ತಿಳಿದುಕೊಂಡು ಹೆಚ್ಚು ಹೆಚ್ಚಾಗಿ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ತಿಳಿಸಿದರು.
ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಸಿದ್ದಪ್ಪ ಮಾತನಾಡುತ್ತ ಗಿಡ ಮರಗಳು ಹೆಚ್ಚಾಗಿರುವ ಮಲೆನಾಡು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಆದ್ದರಿಂದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಗಿಡ ಮರಗಳನ್ನು ಬೆಳೆಸುವ ಜಾಗೃತಿ ಎಲ್ಲರಲ್ಲಿಯೂ ಮೂಡಬೇಕು ಎಂದು ಹೇಳಿದರು.
ಉಪನ್ಯಾಸಕ ರಮೇಶ್, ಡಾ.ಶ್ರೀಧರ್‌ಮೂರ್ತಿ, ಪ್ರಹ್ಲಾದ್ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಗ್ರೀನ್‌ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹಸಿರು ಉಡುಗೆ ತೊಟ್ಟು ಗ್ರೀನ್‌ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು.