ಚಿತ್ರದುರ್ಗ: ಪರಿಸರ ಸಂರಕ್ಷಣೆಯಿಂದ ಮಾತ್ರ ಭೂಮಿಯ ಮೇಲಿರುವ ಸಂಪತ್ತನ್ನು ಉಳಿಸಲು ಸಾಧ್ಯ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಪ್ರತಿಯೊಬ್ಬರು ಗಿಡ ಒಂದೊಂದು ಗಿಡ ನೆಟ್ಟು ಪರಿಸರಕ್ಕೆ ಕೊಡುಗೆ ನೀಡಿ ಎಂದು ನಾಟ್ಯರಂಜನಿ ನೃತ್ಯ ಕಲಾವಿದ ಕಿರಣ್‌ಕುಮಾರ್ ವಿದ್ಯಾರ್ಥಿನಿಯರಿಗೆ ತಿಳಿಸಿದರು.
ನೆಹರು ಯುವ ಕೇಂದ್ರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ರಂಗ ಭಂಡಾರ ಕಲಾ ಸಂಘ, ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಕಲಾ ಕಾಲೇಜು ಹಿಂಭಾಗದಲ್ಲಿರುವ ದಿವಂಗತ ಡಿ.ದೇವರಾಜ ಅರಸ್ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಪತ್ತು ಸಂರಕ್ಷಣಾ ಅರಿವು ಸಂಕಲ್ಪ ಸಿದ್ದಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹಸಿರು ಸಂಪತ್ತು ಗಿಡ ಮರ ಇರುವ ಕಡೆ ಸಮೃದ್ದಿಯಾಗಿ ಮಳೆ ಸುರಿಯುತ್ತದೆ. ಇದರಿಂದ ಕಾಲ ಕಾಲಕ್ಕೆ ಬೆಳೆಯಾಗಿ ರೈತಾಪಿ ವರ್ಗ ಸೇರಿದಂತೆ ಇಡೀ ಜೀವ ಸಂಕುಲವೇ ನೆಮ್ಮದಿಯಿಂದ ಜೀವಿಸಬಹುದು ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಪ್ರಕೃತಿಯಲ್ಲಿರುವ ಹಸಿರು ಸಂಪತ್ತನ್ನು ನಾಶಪಡಿಸಲಾಗುತ್ತಿದೆ. ನಾಶ-ವಿನಾಶ ವೇಗವಾಗಿ ಸಾಗುತ್ತಿದೆ. ಆದರೆ ಗಿಡಗಳನ್ನು ನೆಟ್ಟು ಪೋಷಿಸುವವರ ಸಂಖ್ಯೆ ಕಡಿಮೆಯಿದೆ. ಈ ನಿಟ್ಟಿನಲ್ಲಿ ನೀವುಗಳು ಒಂದೊಂದು ಗಿಡ ನೆಟ್ಟು ನೀರುಣಿಸಿ ಪೋಷಿಸಿ ಬೆಳೆಸಿದರೆ ಮುಂದಿನ ಪೀಳಿಗೆಗೆ ಹಸಿರು ಸಂಪತ್ತನ್ನು ಉಳಿಸಬಹುದು ಎಂದು ಹೇಳಿದರು.
ಬಯಲು ಶೌಚದಿಂದ ಪರಿಸರ ಹಾಳಾಗುವುದನ್ನು ತಡೆಯಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮನೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ದೇಶದ ಪ್ರಧಾನಿ ನರೇಂದ್ರಮೋದಿರವರು ಸ್ಚಚ್ಚ ಅಭಿಯಾನ ಆಂದೋಲನವನ್ನೇ ಆರಂಭಿಸಿದ್ದಾರೆ. ಬಯಲಿನಲ್ಲಿ ಶೌಚ ಮಾಡುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎನ್ನುವ ಎಚ್ಚರಿಕೆ ಪ್ರಾಥಮಿಕ ಹಂತದಿಂದಲೇ ಇರಬೇಕು ಎಂದರು.
ಎಸ್.ಜೆ.ಎಂ.ಶಾಲೆಯ ಶಿಕ್ಷಕಿ ಎಸ್.ಅನಿತ ಮಾತನಾಡಿ ಶಿಕ್ಷಣದ ಜೊತೆ ಪರಿಸರ ಸಂರಕ್ಷಣೆ ಕಡೆಗೂ ಹೆಚ್ಚಿನ ಮಹತ್ವ ನೀಡುವ ಗುಣವನ್ನು ವಿದ್ಯಾರ್ಥಿನಿಯರು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಛಲ ಮತ್ತು ಗುರಿ ಇದ್ದಾಗ ಮಾತ್ರ ಜೀವನದಲ್ಲಿ ಏನಾದರೂ ಯಶಸ್ಸನ್ನು ಗಳಿಸಲು ಸಾಧ್ಯ. ಕೇವಲ ಪುಸ್ತಕದ ಹುಳುಗಳಾಗದೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಆತ್ಮಸ್ಥೈರ್ಯ ಇರಬೇಕು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ವಿದ್ಯಾರ್ಥಿನಿಲಯದ ನಿಲಯಪಾಲಕಿ ಜಾಯದ, ಎಸ್.ಜೆ.ಎಂ.ಶಾಲೆಯ ಶಿಕ್ಷಕಿ ಹೇಮಲತಾ, ಎನ್.ಎಸ್.ಎಸ್.ಕಾರ್ಯಕರ್ತೆ ಮಮತ, ರಂಗ ಭಂಡಾರ ಕಲಾ ಸಂಘದ ಅಧ್ಯಕ್ಷೆ ಬಿ.ನಿರ್ಮಲ ವೇದಿಕೆಯಲ್ಲಿದ್ದರು.