ಚಿತ್ರದುರ್ಗ: ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಎಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿದ್ದು, ಇವರ ಕನಸು ನನಸಾಗಿಸಲು, ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ, ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೩ ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ತಿಳಿಸಿದರು.

ಸ್ವಾತಂತ್ರ್ಯ ದಿನದ ಈ ಸುವರ್ಣ ಸಂದರ್ಭದಲ್ಲಿ ಅಪ್ರತಿಮ ತ್ಯಾಗ ಮತ್ತು ಬಲಿದಾನದ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಬ್ರಿಟಿಷರ ಆಡಳಿತದಿಂದ ದೇಶವನ್ನು ಮುಕ್ತಗೊಳಿಸಲು, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ, ಜನಸಮುದಾಯವನ್ನು ಜಾಗೃತಗೊಳಿಸಿ, ಜನಶಕ್ತಿಯನ್ನು ಸಂಘಟಿಸಿ, ಸ್ವಾತಂತ್ರ್ಯಕ್ಕೆ ಕಾರಣರಾದ ಎಲ್ಲಾ ಅಗ್ರಗಣ್ಯರಿಗೆ ನಮನ ಸಲ್ಲಿಸುತ್ತೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗ ಜಿಲ್ಲೆಯ ಕೊಡುಗೆಯೂ ಪ್ರಮುಖವಾಗಿದ್ದು, ಎಸ್. ನಿಜಲಿಂಗಪ್ಪ, ದುಮ್ಮಿ ಮುರಿಗೆಪ್ಪ, ಗೋವಿಂದರೆಡ್ಡಿ, ಕೆ. ಹನುಮಂತಪ್ಪ ಅವರ ಹೋರಾಟವನ್ನು ಎಲ್ಲರೂ ಸ್ಮರಿಸಬೇಕಿದೆ. ಸಿಪಾಯಿದಂಗೆ, ಕ್ವಿಟ್ ಇಂಡಿಯಾ ಚಳುವಳಿ, ಸ್ವದೇಶಿ ಚಳುವಳಿ, ಉಪ್ಪಿನ ಸತ್ಯಾಗ್ರಹ ಮುಂತಾದ ಪ್ರಮುಖ ಚಳುವಳಿಗಳು ದೇಶ ಸ್ವಾತಂತ್ರ್ಯ ಪಡೆಯಲು ಮಹತ್ವದ ಪಾತ್ರ ವಹಿಸಿದವು. ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರ ಸೇವೆಯ ಪವಿತ್ರ ಕಾರ್ಯಕ್ಕೆ ತಮ್ಮ ಬದುಕು ಮೀಸಲಿಡಬೇಕು.

ಚಿತ್ರದುರ್ಗ ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದು, ೬ ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಈಗಾಗಲೆ ಘೋಷಿಸಿದೆ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ವ್ಯವಸ್ಥೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ರೈತರು ಮಳೆಗೆ ತಕ್ಕಂತೆ ಬೆಳೆಯನ್ನು ಬದಲಾಯಿಸಬೇಕು. ಕಡಿಮೆ ಮಳೆಗೆ ಹೊಂದಿಕೊಳ್ಳುವ ನವಣೆ, ಊದಲು, ಸಾಮೆ, ಕೊರಲೆ, ಹಾರಕ, ಬರಗುನಂತಹ ಸಿರಿಧಾನ್ಯಗಳನ್ನು ಬೆಳೆದಲ್ಲಿ ರೈತರಿಗೆ ಅನುಕೂಲವಾಗುವುದಲ್ಲದೆ, ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ೧೦ ಸಾವಿರ ರೂ. ಪ್ರೋತ್ಸಾಹಧನ ಪಡೆಯಬಹುದು. ಮಹಾತ್ಮ ಗಾಂಧೀಜಿಯವರು ’ಗ್ರಾಮಗಳ ಅಭಿವೃದ್ಧಿ ದೇಶದ ಅಭಿವೃದ್ಧಿ’ ಎಂದು ಹೇಳಿದ್ದರು. ಅದರಂತೆ ಯೋಜನೆಗಳನ್ನು ಗ್ರಾಮಕ್ಕೆ ತಲುಪಿಸುವಲ್ಲಿ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲಾಡಳಿತ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ೭ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚಮುಕ್ತ ಪ್ರದೇಶಗಳೆಂದು ಈಗಾಗಲೇ ಘೋಷಿಸಲಾಗಿದ್ದು, ಜಿಲ್ಲೆಯನ್ನು ಮತ್ತಷ್ಟು ಸ್ವಚ್ಚ ಹಾಗೂ ಸುಂದರಗೊಳಿಸುವ ಉದ್ದೇಶದಿಂದ ’ನಮ್ಮ ಚಿತ್ತ ಸ್ವಚ್ಚತೆಯತ್ತ’ ಕಾರ್ಯಕ್ರಮ ಕಳೆದ ಜುಲೈನಿಂದ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಪಟ್ಟಣ ಪ್ರದೇಶಗಳಲ್ಲಿ ತಮ್ಮ ಕುಂದುಕೊರತೆಗಳನ್ನು ದಾಖಲಿಸಲು ಜಿಲ್ಲೆಯಲ್ಲಿ ನೂತನವಾಗಿ ’ಹಿತೈಷಿ’ ಎಂಬ ಮೊಬೈಲ್ ಆಪ್‌ನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಈ ಆಪ್ ಮೂಲಕ ನಗರದ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಿ, ೨೪ ಗಂಟೆಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು. ದೇಶದ ಸಮಗ್ರತೆ ಕಾಪಾಡಿಕೊಂಡು ಪ್ರಗತಿ ಸಾಧಿಸಲು ಸ್ವಾತಂತ್ರ್ಯ ದಿನಾಚರಣೆ ಎಲ್ಲರಲ್ಲೂ ಹೊಸ ಶಕ್ತಿ ಮತ್ತು ಹುರುಪು ತುಂಬುವಂತಾಗಲಿ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಆಶಯ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ವಿವಿಧ ತಂಡಗಳಿಂದ ಗೌರವ ರಕ್ಷೆ ಸ್ವೀಕರಿಸಿದರು, ೩೦ ತಂಡಗಳಿಂದ ಮೈದಾನದಲ್ಲಿ ಆಕರ್ಷಕ ಕವಾಯತು, ಪಥ ಸಂಚಲನ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸದರಾದ ಎ. ನಾರಾಯಣಸ್ವಾಮಿ, ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಿ.ಎಂ. ವಿಶಾಲಾಕ್ಷಿ ನಟರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ರಕ್ಷಣಾಧಿಕಾರಿ ಡಾ. ಕೆ. ಅರುಣ್, ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯ್ ಕುಮಾರ್, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ತಹಸಿಲ್ದಾರ್ ಕಾಂತರಾಜ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಜಿ.ಪಂ. ಸದಸ್ಯರು, ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ಹೋರಾಟಗಾರರಾದ ಬುರುಜಿನರೊಪ್ಪದ ಕೆ.ಎಲ್.ತಿಪ್ಪೆಸ್ವಾಮಿ, ಕೋವೇರಹಟ್ಟಿ ಗೋವಿಂದಪ್ಪ, ಕೂನಬೇವು ಭೀಮಪ್ಪ, ಜಾಫರ್ ಷರೀಫ್, ಮರಡಿಹಳ್ಳಿ ಹನುಮಂತಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪುನೀತ್ ಕುಮಾರ್ ಹೆಚ್, ಅನಿಲ್, ದಿವ್ಯಶ್ರೀ, ರಾಕೇಶ್, ಮಾಧುರಿ, ಅಲಿಶಾ ಹಾಗೂ ಚಂದನ ಇವರನ್ನು ಸನ್ಮಾನಿಸಲಾಯಿತು. ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ನಗರದ ಕೋಟೆ ಸರ್ಕಾರಿ ಪ್ರೌಢ ಶಾಲೆ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಲಸಂರಕ್ಷಣೆ ವಿಷಯಾಧಾರಿತ ರೂಪಕ ಪ್ರದರ್ಶನ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಯಿತು. ಆರೋಗ್ಯ ಇಲಾಖೆಯ ವತಿಯಿಂದ ಶಿಶು ಮತ್ತು ತಾಯಿ ಮರಣ ತಡೆಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಿದ ಪ್ರದರ್ಶನ ಪ್ರಶಂಸೆಗೆ ಪಾತ್ರವಾಯಿತು. ವಾಸವಿ ವಿದ್ಯಾಸಂಸ್ಥೆ, ಡಾನ್ ಬಾಸ್ಕೋ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರದರ್ಶನ ನೀಡಿದರು.