ಮೈಸೂರು: ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರ ತಂದೆ ರಾಮಶೇಷ ಅವರು ಇಂದು ಬೆಳಗ್ಗೆ ನಿಧನರಾದರು.

ರಾಮಶೇಷ ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆ ಫಲಿಸದೇ ಮೈಸೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ವಿದ್ವಾನ್ ಅವರು ಮೈಸೂರಿನ ಬೋಗಾದಿ 2ನೇ ಹಂತದಲ್ಲಿ ವಾಸವಾಗಿದ್ದರು. ಅವರು ತಮ್ಮ ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸದ್ಯ ಅಮೆರಿಕ ಪ್ರವಾಸದಲ್ಲಿದ್ದ ವಿಜಯ್ ಪ್ರಕಾಶ್, ವಿಷಯ ತಿಳಿದು ಹಿಂತಿರುಗುತ್ತಿದ್ದಾರೆ ಎಂದು ತಿಳಿದುಬಂದಿದೆ.