ಚಿತ್ರದುರ್ಗ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ೨೦೧೭ನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ನಡೆಸುತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.

 

ನಗರದಲ್ಲಿ ಖಾಸಗಿ ಚಿಕಿತ್ಸೆ ಬಂದ್ ಮಾಡುವುದರ ಮೂಲಕ ಸರ್ಕಾರ ಜಾರಿ ತರಲು ಉದ್ದೇಶಿಸಿರುವ ತಿದ್ದುಪಡಿಯನ್ನು ವಿರೋಧಿಸಿದೆ. ಸರಕಾರ ಮಸೂದೆ ಹಿಂಪಡೆಯದಿದ್ದಲ್ಲಿ ಒಪಿಡಿ ಬಂದ್ ಮುಂದುವರಿಸುವು ದಾಗಿ ಸಂಘಟನೆಗಳು ಎಚ್ಚರಿಸಿವೆ. ನಗರದಲ್ಲಿ ಇರುವ ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿದ್ದರ ಫಲವಾಗಿ ಹಲವಾರು ರೋಗಿಗಳು ಚಿಕಿತ್ಸೆಗಾಗಿ ಕಾದು ಕುಳಿತ್ತಿದ್ದ ದ್ಯಶ್ಯ ನಗರದ ವಿವಿಧ ಖಾಸಗಿ ಆಸ್ಪತ್ರೆಗಳ ಮುಂಭಾಗದಲ್ಲಿ ಕಂಡು ಬಂದಿತು.

ಸದ್ಯ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಮಂಡನೆಯಾಗದ ಕಾರಣ ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ ಎಂದು ವೈದ್ಯ ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಒಪಿಡಿ ಬಂದ್ ಹಿನ್ನಲೆಯಲ್ಲಿ ಸರಕಾರಿ ವೈದ್ಯರು ಮತ್ತು ಸಿಬ್ಬಂದಿಗಳ ರಜೆ ರದ್ದುಗೊಳಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಬಂದ್‌ನಿಂದ ಹೊರರೋಗಿ ವಿಭಾಗ ಹೊರತು ಪಡಿಸಿ ತುರ್ತು ಸೇವೆ, ಡಯಾಲಿಸಿಸ್, ಕ್ಯಾನ್ಸರ್ ಚಿಕಿತ್ಸೆಗೆ ಯಾವುದೇ ಅಡ್ಡಿ ಇರುವುದಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದ್ದಲ್ಲಿಯೇ ಆರೋಗ್ಯ ಸಚಿವ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಿದ್ದುಪಡಿ ವಿಧೇಯಕ ಮಂಡನೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ವಿಧೇಯಕ ಮಂಡನೆಯಾಗದಿದ್ದರೆ ನಾನು ಸಚಿವ ಸ್ಥಾನ ತೊರೆಯುತ್ತೇನೆ ಎಂದು ಅವರು ಹೇಳಿದ್ದಾರೆ. ಯಾರದ್ದೋ ಪ್ರತಿಭಟನೆಗೆ ಹೆದರಿ ವಿಧೇಯಕ ಮಂಡನೆ ಆಗದಿದ್ದರೇ ಸರಿ ಹೋಗುವುದಿಲ್ಲ ಎಂದು ರಮೇಶ್ ಕುಮಾರ್ ಸಿಎಂಗೆ ಖಡಕ್ ಆಗಿ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ೨೦೧೭ (ಕೆಪಿಎಂಇ) ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ಭಾರತೀಯ ವೈದ್ಯ ಸಂಘದ (ಐಎಂಎ) ರಾಜ್ಯ ಘಟಕದ ಸದಸ್ಯರು ಬೆಳಗಾವಿಯ ಸುವರ್ಣ ಸೌಧದ ಸಮೀಪವಿರುವ ತಾರಿಹಾಳದಲ್ಲಿ ನವೆಂಬರ್ ೧೩ರಿಂದ ಧರಣಿ ನಡೆಸುತ್ತಿದ್ದು, ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು ವೈದ್ಯರ ಜತೆ ಸಂದಾನಕ್ಕೆ ಕರೆದು ಒಂದು ತೀರ್ಮಾನಕ್ಕೆ ಬರುವುದಕ್ಕೆ ನಿರ್ಧರಿಸಿದ್ದರೆ, ಮತ್ತೊಂದೆಡೆ ಆರೋಗ್ಯ ಮಂತ್ರಿ ರಮೇಶ್ ಕುಮಾರ್ ರಾಜೀನಾಮೆ ಬೆದರಿ ಹಾಕಿದ್ದಾರೆ.

ಮಸೂದೆಯನ್ನು ಮಂಡನೆ ಮಾಡಬಾರದು ಎಂದು ಒತ್ತಾಯಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರದಿಂದ ಉಪವಾಸ ನಡೆಸಲಿದ್ದಾರೆ. ಸರ್ಕಾರದ ಜೊತೆ ವೈದ್ಯರು ನಡೆಸಿದ ಮಾತುಕತೆ ಫಲ ನೀಡಿಲ್ಲ. ಮುಂದಿನ ವಾರ ವಿಧೇಯಕ ಮಂಡನೆ ಬಗ್ಗೆ ಚರ್ಚೆ ಮಾಡೋಣ ಎಂದು ಸಿದ್ದರಾಮಯ್ಯ ರಮೇಶ್ ಕುಮಾರ್ ಅವರನ್ನು ಸಮಾಧಾನಪಡಿಸಿದ್ದಾರೆ. ಕೆಲವು ಶಾಸಕರು ವಿಧೇಯಕದ ಪರವಾಗಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಚಿಕಿತ್ಸೆಗಾಗಿ ಹೊರ ರಾಜ್ಯಗಳಿಗೆ ತೆರಳುತ್ತಿರುವ ರೋಗಿಗಳು ; ಕರ್ನಾಟಕ ರಾಜ್ಯದಲ್ಲಿ ಖಾಸಗಿ ವೈದ್ಯರು ತಮ್ಮ ಬೇಡಿಕೆ ಈಡೇರಿಕೆಗಾಗಿ ತಮ್ಮ ಕ್ಲಿನಿಕ್‌ಗಳನ್ನು ಬಂದ್ ಮಾಡುವುದರ ಮೂಲಕ ಪ್ರತಿಭಟನೆ ನಡೆಸುತ್ತಿದ್ದರೆ ವಿವಿಧ ರೀತಿಯ ರೋಗಗಳಿಂದ ನರಳುತ್ತಿರುವ ರೋಗಿಗಳು ಅಲ್ಲದೆ ಪ್ರತಿ ದಿನ ಚಿಕಿತ್ಸೆ ಪಡೆಯಲೇ ಬೇಕಾದ ಅನಿವಾರ್ಯತೆ ಇರುವ ರೋಗಿಗಳು ಬೇರೆ ದಾರಿಯಿಲ್ಲ ಚಿಕಿತ್ಸೆಗಾಗಿ ಹೊರ ರಾಜ್ಯಗಳಿಗೆ ತೆರಳುತ್ತಿದ್ದಾರೆ.