ಚಿತ್ರದುರ್ಗ: ಯುವ ವಯಸ್ಸಿಗೆ ಪ್ರವೇಶ ಮಾಡುತ್ತಿದ್ದಂತೆ ಕ್ರೀಡಾ ಚಟುವಟಿಕೆಗಳಿಂದ ದೂರ ಇರುವ ಸಂಸ್ಕೃತಿ ಬಿಟ್ಟು ಸದಾ ಕ್ರೀಡೆಯಲ್ಲಿ ತೊಡಗಿಕೊಂಡರೆ ಮಾತ್ರ ಆರೋಗ್ಯವಂತರಾಗಿರಲು ಸಾಧ ಎಂದು ಜಿಲ್ಲಾಧಿಕಾರಿ ವಿಜಯ ಜೋತ್ಸ್ನ ಹೇಳಿದರು.
೨೦೧೭-೧೮ನೇ ಸಾಲಿನ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು ಜಿಲ್ಲಾ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುತ್ತಾರೆ. ಕಾಲೇಜಿಗೆ ಪ್ರವೇಶ ಮಾಡುತ್ತಿದ್ದಂತೆ ದೊಡ್ಡರಾಗಿದ್ದೇವೆ ಎಂಬ ಭಾವನೆಯಿಂದ ಕ್ರೀಡೆಯಲ್ಲಿ ಆಸಕ್ತಿ ತೋರುವುದಿಲ್ಲ. ಇದು ತಪ್ಪು. ಕ್ರೀಡೆಗೆ ವಯಸ್ಸಿನ ಮಿತಿ ಇಲ್ಲ. ಯಾರೂ ಬೇಕಾದರೆ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು ಎಂದರು.
ಶಾಲಾ ಕಾಲೇಜುಗಳಲ್ಲಿ ರ್‍ಯಾಗಿಂಗ್ ಅಥವಾ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು ಸೇರಿದಂತೆ ಯಾವುದೇ ತೊಂದರೆಯಾದರೆ ತಕ್ಷಣ ೧೦೯೮ಗೆ ಕರೆ ಮಾಡಿದರೆ ಅಧಿಕಾರಿಗಳು ತಕ್ಷಣ ಸ್ಪಂದಿಸುತ್ತಾರೆ. ಇದು ಉಚಿತ ಕರೆಯಾಗಿದ್ದು ಸ್ನೇಹಿತರು ತೊಂದರೆಗೆ ಸಿಲುಕಿದಾಗಲೂ ಮಾಹಿತಿ ನೀಡಿದರೆ ರಕ್ಷಿಸಲಾಗುವುದು ಎಂದು ಹೇಳಿದರು.
ಜಿಲ್ಲಾಪಂಚಾಯತ್ ಅಧ್ಯಕ್ಷೆ ಸೌಭಾಗ್ಯಬಸವರಾಜನ್ ಉದ್ಘಾಟಿಸಿದರು. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ, ಸದಸ್ಯ ನರಸಿಂಹರಾಜು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪ್ರಕಾಶ್‌ಮೂರ್ತಿ ಶಿಕ್ಷಣ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಂದ್ರನಾಯ್ಕ್, ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ರಾಮಕೃಷ್ಣಪ್ಪ, ತಹಸೀಲ್ದಾರ್ ಮಲ್ಲಿಕಾರ್ಜುನಪ್ಪ ಹಾಗೂ ಇತರರು ಭಾಗವಹಿಸಿದ್ದರು. ತೇಜಸ್ವಿ ಪ್ರಾರ್ಥಿಸಿದಳು. ವಾಲಿಬಾಲ್ ತರಬೇತುದಾರ ಮಹಮದ್ ಮಹಿಬುಲ್ಲಾ ಸ್ವಾಗತಿಸಿದರು.