ಚಿತ್ರದುರ್ಗ: ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ ದೈಹಿಕ ಶಿಕ್ಷಕರು ನೀಡುವ ತರಬೇತಿಯ ಜೊತೆಗೆ ಪೋಷಕರ ಸಹಕಾರವು ಅತ್ಯವಶ್ಯಕ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ರೇವಣಸಿದ್ದಪ್ಪ ಹೇಳಿದರು.
ರಾಜಸ್ಥಾನದ ಬಿಕನೇರ್‌ನಲ್ಲಿ ನಡೆಯುವ ಹದಿನಾಲ್ಕು ವರ್ಷದೊಳಗಿನ ಬಾಲಕಿಯರ ವಿಭಾಗದ ರಾಷ್ಟ್ರೀಯ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಎಂಟನೆ ತರಗತಿಯ ಎಸ್.ಸುಮ, ಎಂ.ರಂಜಿತ, ಎ.ಮೆಹಕ್ ಇವರುಗಳಿಗೆ ವಿ.ಪಿ.ಬಡಾವಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದರು.

ರಾಜಸ್ಥಾನಕ್ಕೆ ಹೋಗುತ್ತಿರುವುದು ದೂರದ ಪಯಣ. ಹೋಬಳಿ, ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಕಡಿಮೆ ಸಾಧನೆಯಲ್ಲ. ಇದರಲ್ಲಿ ದೈಹಿಕ ಶಿಕ್ಷಕ ಶಿವರಾಂರವರ ಪಾತ್ರ ಅಪಾರವಾಗಿದೆ. ಜಿಲ್ಲೆಯ ಎಲ್ಲಾ ದೈಹಿಕ ಶಿಕ್ಷಕರಿಗೆ ಇವರು ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡಿ ಗೆಲ್ಲುವ ಮೂಲಕ ಶಿಕ್ಷಕರು, ಹಾಗೂ ಪೋಷಕರು ಮತ್ತು ಜಿಲ್ಲೆಗೆ ಕೀರ್ತಿ ತರಲಿ ಎಂದು ಹಾರೈಸಿದರು.
ಇಂಜಿನಿಯರ್ ಎಂ.ಕೆ.ರವೀಂದ್ರ ಮಾತನಾಡುತ್ತ ರೋಟರಿ ಸಂಸ್ಥೆ ಕಳೆದ ೩೦ ವರ್ಷಗಳಿಂದಲೂ ಪೊಲೀಯೋ

ಹಾಗೂ ಅನಕ್ಷರತೆ ನಿರ್ಮೂಲನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಲೆ ಬರುತ್ತಿದೆ. ಅನಕ್ಷರತೆಯನ್ನು ಹೋಗಲಾಡಿಸಲು ೩೫೦ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನ ರೋಟರಿ ಸಂಸ್ಥೆಯಿಂದ ನಡೆಯುತ್ತಿದೆ. ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ಹದಿನೆಂಟು ಹ್ಯಾಪಿ ಶಾಲೆಗಳನ್ನು ಮಾಡಲಾಗಿದೆ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಗೇಟ್ ಮತ್ತು ಶೀಟ್‌ಗಳನ್ನು ಹಾಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ದೈಹಿಕ ಶಿಕ್ಷಣಾಧಿಕಾರಿ ಎಂ.ಹೆಚ್.ಜಯಣ್ಣ, ಶಿಕ್ಷಣ ಸಂಯೋಜಕಿ ಶಶಿಕಲ, ಗಾಯತ್ರಿಶಿವರಾಂ, ರಾಘವೇಂದ್ರ, ವಿದ್ಯಾವಿಕಾಸ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್, ದಿನೇಶ್, ಸೋಮಣ್ಣ, ಮುಖ್ಯಶಿಕ್ಷಕಿ ನಾಗರತ್ನಮ್ಮ ವೇದಿಕೆಯಲ್ಲಿದ್ದರು.  ದೈಹಿಕ ಶಿಕ್ಷಕ ಶಿವರಾಂರನ್ನು ಸನ್ಮಾನಿಸಲಾಯಿತು.