ಚಿತ್ರದುರ್ಗ: ಹುಟ್ಟಿನಿಂದ ಹಿಡಿದು ಸಾಯುವತನಕ ಎಲ್ಲರ ಜೀವನದಲ್ಲಿಯೂ ಎದುರಾಗುವ ನಾನಾ ಸಮಸ್ಯೆಗಳನ್ನು ಬಗೆಹರಿಸಲು ಮೊದಲು ಪೊಲೀಸರು ಬೇಕು. ಆದರೂ ಸಾರ್ವಜನಿಕರು ಪೊಲೀಸರನ್ನು ಕೆಟ್ಟವರೆಂಬ ದೃಷ್ಠಿಯಿಂದ ನೋಡುವುದು ನಿಲ್ಲಬೇಕು ಎಂದು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನಾಗರಾಜ್ ಮನವಿ ಮಾಡಿದರು.
ಸರ್ಕಾರಿ ಕಲಾ ಕಾಲೇಜಿನ ಅಪರಾಧಶಾಸ್ತ್ರ ವಿಭಾಗದ ವಿದ್ಯಾರ್ಥಿಗಳೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂವಾದ ನಡೆಸಿ ಕಾನೂನು ಬಗ್ಗೆ ಸಾಮಾನ್ಯ ತಿಳುವಳಿಕೆ ನೀಡಿ ಮಾತನಾಡಿದ ಇನ್ಸ್‌ಪೆಕ್ಟರ್ ನಾಗರಾಜ್‌ರವರು ಕಣ್ಣೆದುರಿಗೆ ಅಪರಾಧ ನಡೆದರು ಕೆಲವರು ಪೊಲೀಸರಿಗೆ ತಿಳಿಸಿದರೆ ಸಾಕ್ಷಿ ಹೇಳಬೇಕೆನ್ನುವ ಒಂದೆ ಕಾರಣಕ್ಕಾಗಿ ಯಾರು ಠಾಣೆಗೆ ಬರುವುದಿಲ್ಲ. ಇದರಿಂದ ಅಪರಾಧಗಳನ್ನು ಹತ್ತಿಕ್ಕುವುದು ಕಷ್ಟವಾಗಿ ಸಮಾಜದಲ್ಲಿ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡಿದಂತಾಗುತ್ತದೆ. ಎಲ್ಲಿಯೇ ಅಪಃಘಾತವಾಗಲಿ, ಅಪರಾಧವಾಗಲಿ, ದೊಂಬಿ ದಾಂಧಲೆ, ಹಲ್ಲೆ ಕೊಲೆ ಸುಲಿಗೆ ಇನ್ನು ಅನೇಕ ಅಪರಾಧಗಳನ್ನು ಕಂಡು ಕಾಣದಂತೆ ಯಾರು ದಯವಿಟ್ಟು ಇರಬೇಡಿ ಪೊಲೀಸರಿಗೆ ವಿಷಯ ತಿಳಿಸಿ ಸಹಕರಿಸಿ ಎಂದು ಕೋರಿದರು.
ಅಪರಾಧ ತಡೆಗಟ್ಟಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಯುವಕರ ಪಾತ್ರ ಅಪಾರವಾದುದು. ಕೆಲವೊಮ್ಮೆ ಅಪಘಾತವಾಗಿ ರಸ್ತೆ ಮಧ್ಯದಲ್ಲಿಯೇ ಗಾಯಾಳುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು ಯಾರು ಹತ್ತಿರ ಸುಳಿಯುವುದಿಲ್ಲ. ಇದು ಸಾಕ್ಷಿ ಹೇಳಬೇಕೆನ್ನುವ ಅರಿವನಿ ಕೊರತೆ ಕಾರಣ. ಈ ರೀತಿ ಮಾಡುವುದರಿಂದ ಅಮೂಲ್ಯವಾದ ಪ್ರಾಣ ಉಳಿಸಿದಂತಾಗುವುದಿಲ್ಲ ಎಂದು ತಿಳುವಳಿಕೆ ಹೇಳಿದರು.
ಕಾರ್ಯಾಂಗದ ವಿಚಾರಕ್ಕೆ ಬಂದರೆ ರಾಷ್ಟ್ರಪತಿ ಮೊದಲಿಗರು. ಅವರ ಕೆಳಗೆ ಉಪ ರಾಷ್ಟ್ರಪತಿ ಪ್ರಧಾನಿ ನಂತರ ಮಂತ್ರಿ ಮಂಡಲವಿರುತ್ತದೆ. ಅದೇ ರೀತಿ ರಾಜ್ಯದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಇವರ ಕೆಳಗೆ ಮಂತ್ರಿಗಳು, ಗೃಹ ಮಂತ್ರಿ, ಗೃಹ ಕಾರ್ಯದರ್ಶಿಗಳಿರುತ್ತಾರೆ. ಇವರೆಲ್ಲರನ್ನು ರಕ್ಷಿಸುವುದು ಪೊಲೀಸರ ಕೆಲಸ. ಪೊಲೀಸ್ ಇಲಾಖೆಯಲ್ಲಿ ಪೇದೆಯಿಂದ ಹಿಡಿದು ಅತ್ಯುನ್ನತ ಡಿ.ಜಿ.ಪಿ.ಹುದ್ದೆವರೆಗೂ ಇದೆ ಪ್ರತಿಯೊಬ್ಬರು ಅವರವರ ಹಂತದಲ್ಲಿ ಸಮಾಜವನ್ನು ಸುರಕ್ಷಿತವಾಗಿಡಲು ದಿನದ ೨೪ ಗಂಟೆಯೂ ದುಡಿಯುತ್ತಾರೆ. ಆದರೂ ಪೊಲೀಸರೆಂದರೆ ಕೆಟ್ಟವರೆಂಬ ತಪ್ಪು ಕಲ್ಪನೆ ಜನರ ಮನಸ್ಸಿನಿಂದ ದೂರವಾಗಿ ಇಲಾಖೆಯೊಂದಿಗೆ ಸಹಕರಿಸಿದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಲು ಸಹಕಾರಿಯಾಗಲಿದೆ ಎಂದರು.
ಕಾನೂನು ತಿಳಿದುಕೊಂಡಷ್ಟು ಭಯ ಜಾಸ್ತಿ. ಕಾನೂನು ತಿಳಿಯದವನಿಗೆ ಭಯ ಇರುವುದಿಲ್ಲ. ಸ್ವತಂತ್ರವಾಗಿ ತಿರುಗಾಡುವವರ ಮೂಲ ಭೂತ ಹಕ್ಕನ್ನು ಕಟ್ಟಿ ಹಾಕಿ ಬಂಧಿಸುವುದೇ ನಿಜವಾದ ಅರೆಸ್ಟ್. ಆದರೆ ಯಾವುದೇ ತಪ್ಪು ಮಾಡದ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿ ಬಂಧಿಸುವುದು ಕಾನೂನು ವಿರುದ್ದವಾದುದು. ಆದ್ದರಿಂದ ಯಾರು ಭಯ ಪಟ್ಟುಕೊಳ್ಳದೆ ನೇರವಾಗಿ ಪೊಲೀಸರ ಬಳಿ ಬಂದು ಕಷ್ಟಗಳನ್ನು ಹೇಳಿಕೊಂಡಾಗ ನಿಜವಾಗಿಯೂ ಪರಿಹಾರ ಸಿಕ್ಕೆ ಸಿಗುತ್ತದೆ ಎಂದು ಹೇಳಿದ ಇನ್ಸ್‌ಪೆಕ್ಟರ್ ನಾಗರಾಜ್ ಕಾನೂನಿನ ವಿವಿಧ ಮಜಲುಗಳನ್ನು ಕ್ರಿಮಿನಾಲಜಿ ವಿದ್ಯಾರ್ಥಿಗಳಿಗೆ ಸೂಕ್ಷ್ಮವಾಗಿ ವಿವರಿಸಿದರು.
ಸರ್ಕಾರಿ ಕಲಾ ಕಾಲೇಜು ಅಪರಾಧಶಾಸ್ತ್ರ ಪ್ರಾಧ್ಯಾಪಕ ಡಾ.ನಟರಾಜ್ ಮಾತನಾಡಿ ಕಾಲೇಜಿನಲ್ಲಿ ಪಾಠ ಮಾಡುವುದಕ್ಕಿಂತ ಮುಖ್ಯವಾಗಿ ಪ್ರಾಯೋಗಿಕವಾಗಿ ಸೈದ್ದಾಂತಿಕ ವಿಚಾರಗಳನ್ನು ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಮಾಡುವ ಉದ್ದೇಶದಿಂದ ಪೊಲೀಸ್ ಠಾಣೆ, ಬಂಧೀಖಾನೆ ಇನ್ನು ಮುಂತಾದ ಕಡೆಗಳಿಗೆ ಕರೆದುಕೊಂಡು ಹೋಗಿ ಕಾನೂನು ವಿಷಯಗಳನ್ನು ಪರಿಚಯಿಸಲಾಗುವುದು ಎಂದರು.