ಚಿತ್ರದುರ್ಗ: ಅತ್ಯಾಚಾರ, ಕೊಲೆ, ದರೋಡೆ ಹೀಗೆ ಹೀನಾತಿ ಹೀನ ಕೃತ್ಯಗಳು ನಡೆದಾಗ ತನಿಖೆ ನಡೆಸುವ ಪೊಲೀಸರು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ಸ್ಟ್ರಾಂಗ್‍ಗಾಗಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದಾಗ ಮಾತ್ರ ಕ್ರಿಮಿನಲ್‍ಗಳನ್ನು ಮಟ್ಟ ಹಾಕಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಎ.ಎಸ್.ಐ.ಗಳಿಗೆ ತಿಳಿಸಿದರು.
ಐಮಂಗಲದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಸೋಮವಾರದಿಂದ ಆರಂಭಗೊಂಡಿರುವ ದಾವಣಗೆರೆ ಪೂರ್ವವಲಯ ಮತ್ತು ಹುಬ್ಬಳ್ಳಿ-ಧಾರವಾಡ ನಗರದ ಸೇವಾನಿರತ ಸಹಾಯಕ ಸಬ್‍ಇನ್ಸ್‍ಪೆಕ್ಟರ್‍ಗಳ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ ಅಣ್ಣ-ತಮ್ಮಂದಿರಿದ್ದಂತೆ ಅನ್ಯೋನ್ಯವಾಗಿ ಕೆಲಸ ಮಾಡಿದಾಗ ಮಾತ್ರ ಅಪರಾಧಿಗಳನ್ನು ಕಾನೂನಿನಡಿ ಶಿಕ್ಷಿಸಿ ಶಾಂತಿಯುತ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿಯೂ ಬೇರೆ ಇಲಾಖೆ ನೌಕರರಿಗಿದ್ದಂತೆ ಅನೇಕ ಸಮಸ್ಯೆಗಳಿವೆ. ಆದರೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸರ್ಕಾರದ ವಿರುದ್ದ ಮುಷ್ಕರ ನಡೆಸುವಂತಿಲ್ಲ. ಸಮಾಜ ನಿಮ್ಮ ಮೇಲೆ ಬಲವಾದ ನಂಬಿಕೆ ಇಟ್ಟಿದೆ. ಗೌರವಕ್ಕೆ ಧಕ್ಕೆ ತಂದುಕೊಳ್ಳಬೇಡಿ. ಎಂತಹ ಕಠಿಣ ಸವಾಲುಗಳು ಎದುರಾದರೂ ತಾಳ್ಮೆ ಕಳೆದುಕೊಳ್ಳುವುದು ಬೇಡ, ನೊಂದು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಬರುವವರ ಜೊತೆ ಸೌಜನ್ಯದಿಂದ ವರ್ತಿಸಿ ಎಂದು ಎಸ್.ಬಿ.ವಸ್ತ್ರಮಠರವರು ಎ.ಎಸ್.ಐ.ಗಳಿಗೆ ಕರೆ ನೀಡಿದರು.
ಯಾವುದೇ ಅಪರಾಧಗಳು ಸಂಭವಿಸಿದಾಗ ಎರಡು ಮೂರು ಮಹಜರ್ ನಡೆಸಿ ಒಬ್ಬ ಸಾಕ್ಷಿ ಹೇಳದಿದ್ದರು ಇನ್ನೊಬ್ಬನಿಂದ ಸಾಕ್ಷಿ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಮರಳು ಮಾಫಿಯಾಗಳ ಮೇಲೆ ಎ.ಎಸ್.ಐ.ಗಳು ರೈಂಡ್ ಮಾಡುವ ಅಧಿಕಾರವಿದೆ. ಮದ್ಯಪಾನ ಮಾಡಿದ ವ್ಯಕ್ತಿಯನ್ನು ಥಳಿಸಬೇಡಿ. ಲಾಕಪ್‍ಡೆತ್ ಆಗದಂತೆ ಎಚ್ಚರದಿಂದಿರಿ. ದೋಷಾರೋಪದಡಿ ಶಿಕ್ಷೆ ನೀಡಬೇಕಾದರೆ ಪೊಲೀಸರು, ವೈದ್ಯರು, ಸಾಕ್ಷಿಗಳು ಪಾತ್ರ ಬಹಳ ಮುಖ್ಯವಾದುದು. ಆರೋಪಿಗಳಿಗೆ ಹಾರ ಹಾಕುವ ಕೆಲಸ ಮಾಡಬೇಡಿ ಎಂದು ತಿಳಿಸಿದರು.
ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪಿ.ಪಾಪಣ್ಣ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಕಾನೂನು ಅಧಿಕಾರಿ ಕೆ.ಎಸ್.ಸತೀಶ್, ಅಪರಾಧಶಾಸ್ತ್ರ ಉಪನ್ಯಾಸಕಿ ಭುವನೇಶ್ವರಿ, ಇನ್ಸ್‍ಪೆಕ್ಟರ್ ವಿಜಯಕುಮಾರ್ ವೇದಿಕೆಯಲ್ಲಿದ್ದರು.
ಪೊಲೀಸ್ ಇನ್ಸ್‍ಪೆಕ್ಟರ್ ಪರಶುರಾಂ ಸ್ವಾಗತಿಸಿದರು. ಮೇಘನ ವಸ್ತ್ರಮಠ ನಿರೂಪಿಸಿದರು.
ಕ್ರಿಮಿನಾಲಜಿ ಪ್ರೊಫೆಸರ್ ನಟರಾಜ್, ಇನ್ಸ್‍ಪೆಕ್ಟರ್ ಸುರೇಶ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.