ಚಿತ್ರದುರ್ಗ: ಕೋವಿಡ್-19 ಸಂಬಂಧ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಹಾಗೂ ಮೇಲ್ವಿಚಾರಣೆ ಮಾಡಲು ವ್ಯಾಪ್ತಿವಾರು ಸೆಕ್ಟರ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಆದೇಶಿಸಿದ್ದಾರೆ.

ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳು, ನೌಕರರನ್ನು ನಿಯೋಜನೆ ಮಾಡಿ ಮುಂದಿನ ಆದೇಶದವರೆಗೂ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ.

ಸೆಕ್ಟರ್ ಅಧಿಕಾರಿಗಳ ತಂಡದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಉಪನ್ಯಾಸಕರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಇತರೆ ಇಲಾಖೆಯ ನೌಕರರು ಸೇರಿದಂತೆ ತಂಡ ರಚಿಸಲಾಗಿದೆ.

ಪ್ರತಿಯೊಂದು ತಂಡದಲ್ಲಿ ಒರ್ವ ಅಧಿಕಾರಿ, ಪೊಲೀಸ್ ಸಿಬ್ಬಂದಿ ಹಾಗೂ ಇತರೆ ಇಲಾಖೆಯ ನೌಕರರು ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ತಂಡವೂ ತಲಾ 8 ಗಂಟೆಗಳ ಕಾಲ ಸರದಿಯಂತೆ ಕಾರ್ಯನಿರ್ವಹಿಸಬೇಕು. ತಾಲ್ಲೂಕುವಾರು ನಿಯೋಜನೆಗೊಂಡ ಸೆಕ್ಟರ್ ಅಧಿಕಾರಿಗಳ ತಂಡಗಳ ವಿವರ ಇಂತಿದೆ. ಮೊಳಕಾಲ್ಮೂರು ವ್ಯಾಪ್ತಿಯಲ್ಲಿ ಒಟ್ಟು 16 ವಾರ್ಡ್‍ಗಳಿದ್ದು, ಮೂರು ತಂಡಗಳು ಕರ್ತವ್ಯ ನಿರ್ವಹಿಸಲಿವೆ. ಚಳ್ಳಕೆರೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್‍ಗಳಿದ್ದು, ಆರು ತಂಡಗಳು ಕರ್ತವ್ಯ ನಿರ್ವಹಿಸಲಿದೆ. ಚಿತ್ರದುರ್ಗ ವ್ಯಾಪ್ತಿಯಲ್ಲಿ 35 ವಾರ್ಡ್‍ಗಳಿದ್ದು, ಒಂಭತ್ತು ತಂಡಗಳು ಕರ್ತವ್ಯ ನಿರ್ವಹಿಸಲಿವೆ. ಹಿರಿಯೂರು ವ್ಯಾಪ್ತಿಯಲ್ಲಿ 31 ವಾರ್ಡ್‍ಗಳಿದ್ದು, ಆರು ತಂಡಗಳು ಕರ್ತವ್ಯ ನಿರ್ವಹಿಸಲಿವೆ. ಹೊಸದುರ್ಗ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳಿದ್ದು, ಮೂರು ತಂಡಗಳು ಕರ್ತವ್ಯ ನಿರ್ವಹಿಸವೆ ಹಾಗೂ ಹೊಳಲ್ಕೆರೆಯಲ್ಲಿ 16 ವಾರ್ಡ್‍ಗಳಿದ್ದು, ಮೂರು ತಂಡಗಳು ಕರ್ತವ್ಯ ನಿರ್ವಹಿಸಲಿವೆ.

ನಿಯೋಜನೆಗೊಂಡ ಸೆಕ್ಟರ್ ಅಧಿಕಾರಿಗಳು ಕೂಡಲೇ ತಮ್ಮ ತಂಡದೊಂದಿಗೆ ಕರ್ತವ್ಯಕ್ಕೆ ಹಾಜರಾಗಬೇಕು. ಜನರ ಚಲನ ವಲನಗಳ ಬಗ್ಗೆ ನಿಗಾ ಇಡಬೇಕು. ಅನಗತ್ಯವಾಗಿ ಸುತ್ತಾಡುವವರ ವಿರುದ್ಧ ಸೂಕ್ತ ಕ್ರಮವಹಿಸುವುದು. ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಗಳು ಕಂಡು ಬಂದಲ್ಲಿ ಜಿಲ್ಲಾ ಕಂಟ್ರೋಲ್ ರೂಂ ನೊಂದಿಗೆ ಸಂಪರ್ಕ ಸಾಧಿಸಿ ಸಮಸ್ಯೆ ಬಗೆಹರಿಸುವುದು. ಲಾಕ್‍ಡೌನ್ ಉಲ್ಲಂಘನೆಯಾಗದಂತೆ ಕ್ರಮವಹಿಸುವುದು. ಕಾಲಕಾಲಕ್ಕೆ ನೀಡುವ ಸೂಚನೆ ಪಾಲಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷತೆ ತೋರಿದ್ದಲ್ಲಿ ಶಿಸ್ತು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.