ಚಿತ್ರದುರ್ಗ : ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದು ಈ ಅವಧಿಯಲ್ಲಿ ಜನರಿಗೆ ತೊಂದರೆಯಾಗದಂತೆ ಅನೇಕ ಪ್ಯಾಕೇಜ್‍ಗಳನ್ನು ಘೋಷಣೆ ಮಾಡಿದೆ. ವಿವಿಧ ಯೋಜನೆಗಳಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾಹಿಸುವುದರಿಂದ ಹಣ ಹಿಂಪಡೆಯಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಎಲ್ಲಾ ಬ್ಯಾಂಕ್‍ಗಳ ಮ್ಯಾನೇಜರ್‍ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಅವರು (ಏ.01) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬ್ಯಾಂಕರ್‍ಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಕೇಂದ್ರ ಸರ್ಕಾರ ಜನಧನ್ ಯೋಜನೆಯಡಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ, ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಪಡೆಯಲು ಮತ್ತು ಕಿಸಾನ್ ಸಮ್ಮಾನ್ ಯೋಜನೆಯಡಿ  ರೈತರಿಗೆ ಹಣವನ್ನು ಅವರ ಖಾತೆಗೆ ವರ್ಗಾಹಿಸಲಾಗುತ್ತಿದೆ. ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಜನರಿಗೆ ದಿನನಿತ್ಯದ ಅವಶ್ಯಕತೆ ಪೂರೈಕೆಗೆ ಹಾಗೂ ಕೃಷಿ ಚಟುವಟಿಕೆಗಳಾಗಿ ಹಣವನ್ನು ತಲುಪಿಸಬೇಕಾಗಿದೆ ಎಂದರು.

ಲಾಕ್‍ಡೌನ್ ಇರುವುದರಿಂದ ಜನರು ಸಂಚಾರ ಮಾಡುವಂತಿಲ್ಲ, ಆದ್ದರಿಂದ ಜನರಿಗೆ ತೊಂದರೆಯಾಗದಂತೆ ಬ್ಯಾಂಕ್‍ಗಳ ವ್ಯವಹಾರ ಪ್ರತಿನಿಧಿಗಳ ಮೂಲಕ ಆಯಾ ಗ್ರಾಮಗಳಿಗೆ ತೆರಳಿ ಖಾತೆದಾರರ ಹಣವನ್ನು ವಿತರಣೆ ಮಾಡಬೇಕು ಹಾಗೂ ಈ ಸಮಯದಲ್ಲಿಯು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಲಾಕ್‍ಡೌನ್ ಅವಧಿಯಲ್ಲಿಯು ಬ್ಯಾಂಕ್‍ಗಳು ವ್ಯವಹಾರ ನಡೆಸುತ್ತಿವೆ. ಈ ಅವಧಿಯಲ್ಲಿ ವಾಹನಗಳ ಸಂಚಾರ ಇಲ್ಲದಿರುವುದರಿಂದ ಬ್ಯಾಂಕ್ ಬಿಸಿಗಳ ಮೂಲಕ ವ್ಯವಹಾರ ನಡೆಸಲು ಸೂಚನೆ ನೀಡಿ ಎಟಿಎಂ ಹಾಗೂ ಇಂಟರ್‍ನೆಟ್ ಬ್ಯಾಂಕಿಂಗ್‍ಗೆ ಹೆಚ್ಚಿನ ಉತ್ತೇಜನ ನೀಡಲು ತಿಳಿಸಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ನಿಂಗೇಗೌಡ, ನಬಾರ್ಡ್ ಡಿಡಿಎಂ ಕವಿತ ಹಾಗೂ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.