ಚಿತ್ರದುರ್ಗ: ಕೋವಿಡ್-19ಗೆ ಸಂಬಂಧಪಟ್ಟಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್‍ಗೆ ಚಿಕಿತ್ಸೆ ಪಡೆಯುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮನವಿ ಮಾಡಿದರು.

ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋವಿಡ್-19 ಚಿಕಿತ್ಸೆಗೆ ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಾಕ್ಟರ್, ಫಾರ್ಮಸಿಸ್ಟ್, ಶುಶ್ರೂಷಕರು, ಗ್ರೂಪ್ “ಡಿ” ಸಿಬ್ಬಂದಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕೋವಿಡ್-19 ರೋಗ ಲಕ್ಷಣಗಳಿಲ್ಲದವರು ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಇದರಿಂದ ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗಂಭೀರ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಕೋವಿಡ್-19 ಗಂಭೀರವಾದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ 175 ಆಕ್ಸಿಜನ್ ಬೆಡ್‍ಗಳನ್ನು ಮೀಸರಿಸಲಾಗಿದ್ದು, ಇದರಲ್ಲಿ 50 ಬೆಡ್‍ಗಳನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗಿದೆ. ಇದರಲ್ಲಿ 18 ವೆಂಟಿಲೇಟರ್ ಹಾಗೂ 20 ಐಸಿಯು ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಆರ್‍ಟಿಪಿಸಿಆರ್ ಲ್ಯಾಬ್ ಪ್ರಾರಂಭ ಮಾಡಲಾಗಿದ್ದು, ಪ್ರತಿ ದಿನ 300 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1255 ಸಕ್ರಿಯ ಪ್ರಕರಣಗಳಿದ್ದು, ಸಿಸಿಸಿಯಲ್ಲಿ 121, ಡಿಸಿಸಿಹೆಚ್‍ನಲ್ಲಿ 115, ಡಿಸಿಹೆಚ್‍ನಲ್ಲಿ 54, ಹೋಂ ಐಸೋಲೇಷನ್‍ನಲ್ಲಿ 873 ಜನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 33 ಜನ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಇದರಲ್ಲಿ 18 ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 60 ವರ್ಷ ಮೇಲ್ಪಟ್ಟವರು ಇದ್ದಾರೆ. ಇನ್ನೂ 15 ಜನ 60 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿದ್ದು, ಕೋವಿಡ್‍ನಿಂದಾಗಿ ಮರಣಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್-19ಗೆ ಸಂಬಂಧಿಸಿದಂತೆ 5034 ಸೋಂಕಿತರಿದ್ದು, ರಾಜ್ಯಕ್ಕೆ ಹೋಲಿಸಿದಾಗ ಜಿಲ್ಲೆಯ ಪಾಸಿಟಿವ್ ರೇಟ್ ಶೇ.9.70 ಇದೆ. ಮರಣ ಪ್ರಮಾಣ ಶೇ.0.65 ಹಾಗೂ ಗುಣಮುಖರಾದವರ ಪ್ರಮಾಣ ಶೇ.75.66 ಇದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 51,708 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ವಿವರಿಸಿದರು.
ಕೋವಿಡ್-19ಗೆ ಚಿಕಿತ್ಸೆ ನೀಡಲು 35 ಜನ ಪರಿಣಿತ ವೈದ್ಯರು, 184 ವೈದ್ಯರು, 450 ಶುಶ್ರೂಷಕಿಯರು, 80 ಲ್ಯಾಬ್ ಟೆಕ್ನಿಷಿಯನ್, 600 ಗ್ರೂಪ್ ಡಿ, 150 ಎಂಟ್ರಿ ಅಪರೇಟರ್, 110 ಫಾರ್ಮಸಿಸ್ಟ್, 34 ಅಂಬುಲೆನ್ಸ್, 108 ಅಂಬುಲೆನ್ಸ್-26 ಇವೆ. ಜಿಲ್ಲೆಯಲ್ಲಿ ಔಷಧಿಗೆ ಕೊರತೆಯಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಔಷಧಿ ಇದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಿಸಿ, ಡಿಸಿಹೆಚ್‍ಸಿ ಹಾಗೂ ಡಿಹೆಚ್‍ಸಿ ಎಂಬ ಮೂರು ತರಹದ ಕೋವಿಡ್ ಆಸ್ಪತ್ರೆಗಳಿವೆ. ಜಿಲ್ಲೆಯಲ್ಲಿ 20 ಕೋವಿಡ್ ಕೇರ್ ಸೆಂಟರ್‍ಗಳಿದ್ದು, (ಸಿಸಿಸಿ) ಯಾವುದೇ ರೋಗಲಕ್ಷಣಗಳಿಲ್ಲದ ಕೋವಿಡ್-19 ಸೋಂಕು ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 1054 ಪ್ರಕರಣಳಿದ್ದು, ಹಾಸ್ಟೆಲ್, ಸಮುದಾಯ ಭವನ, ಲಾಡ್ಜ್‍ಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಡಾಕ್ಟರ್, ಶುಶ್ರೂಷಕಿ, ಗ್ರೂಪ್ “ಡಿ” ಸಿಬ್ಬಂದಿ ಇದ್ದು, ಇಲ್ಲಿ ಆಹಾರದ ಸೌಲಭ್ಯ, ಔಷಧಿಗಳನ್ನು ಪೂರೈಸಲಾಗುತ್ತಿದೆ. 14 ದಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇದ್ದು, ಗುಣಮುಖರಾದ ನಂತರ ಅವರು 7 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರುವುದು ಕಡ್ಡಾಯವಾಗಿದೆ. ಹೋಂ ಕ್ವಾರಂಟೈನ್‍ಲ್ಲಿರುವವರು ತಿಳುವಳಿಕೆ ಪತ್ರದಲ್ಲಿ ಇರುವ ಸೂಚನೆಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಸಿಸಿಸಿಯಲ್ಲಿ ಒಟ್ಟು 1140 ಆಕ್ಸಿಜನ್ ಬೆಡ್‍ಗಳಿವೆ. ಪ್ರಸ್ತುತ 121 ಜನರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಸಿಸಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ಡಿಸಿಹೆಚ್‍ಸಿ (ಡಿಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್)ಗೆ ರವಾನಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 17 ಡಿಸಿಹೆಚ್‍ಸಿಗಳಿವೆ. ಇಲ್ಲಿ ಪಾಸಿಟಿವ್ ಮೈಲ್ಡ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಡಾಕ್ಟರ್ಸ್, ಶುಶ್ರೂಷಕಿಯರು ಸೇರಿದಂತೆ ಆಹಾರ ಮತ್ತು ಔಷಧಿ ವಿತರಣೆಯ ಸೌಲಭ್ಯಗಳಿರುತ್ತವೆ. ಜೊತೆಗೆ ಆಕ್ಸಿಜನ್ ಬೆಡ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಪ್ರತಿ ತಾಲ್ಲೂಕಿನಲ್ಲಿ 50 ಬೆಡ್‍ಗಳಂತೆ ಆಕ್ಸಿಜನ್ ಬೆಡ್‍ಗಳ ಸೌಲಭ್ಯವನ್ನು ಒದಗಿಸಲಾಗಿದೆ. ಒಟ್ಟು 250 ಆಕ್ಸಿಜನ್ ಬೆಡ್ ಸೌಲಭ್ಯವಿದೆ ಎಂದರು.