ಚಿತ್ರದುರ್ಗ: ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವ ಕೋಮುವಾದಿ ಬಿಜೆಪಿ.ಗೆ ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಅಧಿಕಾರದಿಂದ ಓಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಚಿತ್ರದುರ್ಗ ಲೋಕಸಭಾ ಕ್ಷೇತ್ರದ  ಮತದಾರರಲ್ಲಿ ಮನವಿ ಮಾಡಿದರು.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಲ್ಕುವರೆ ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರಮೋದಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರ ಅಭಿವೃದ್ದಿಗೆ ಚಿಂತನೆ ಮಾಡುವ ಬದಲು ಕಾರ್ಪೊರೇಟರ್, ಉದ್ಯಮಿ, ಬಂಡವಾಳ ಶಾಹಿಗಳ ಪರವಾಗಿ ನಿಂತಿದ್ದಾರೆ. ಇಲ್ಲಿಯವರೆಗೂ ದೇಶವನ್ನಾಳಿದ ಬೇರೆ ಯಾವ ಪಕ್ಷಗಳು ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳಲಿಲ್ಲ. ಆದರೆ ಪ್ರಧಾನಿ ಮೋದಿ ಹಿಂದುತ್ವದ ಹೆಸರಿನಲ್ಲಿ ಜಾತಿ ಧರ್ಮಗಳ ನಡುವೆ ಗಲಭೆ ಸೃಷ್ಟಿಸಿ ಮತಗಳನ್ನು ಕಬಳಿಸುವ ತಂತ್ರಗಾರಿಕೆ ನಡೆಸುತ್ತಿರುವುದರ ವಿರುದ್ದ ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಂಡು ಬರುವ ಹದಿನೆಂಟರಂದು ನಡೆಯುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ವಿನಂತಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನೇಕಲ್ ನಾರಾಯಣಸ್ವಾಮಿ ಅವರ ಕ್ಷೇತ್ರವನ್ನು ಯಾವ ರೀತಿಯಲ್ಲಿಯೂ ಅಭಿವೃದ್ದಿಪಡಿಸಿಲ್ಲ. ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಸಮಸ್ಯೆಗಳ ಅರಿವು ಅವರಿಗಿಲ್ಲ. ಮನುವಾದಿ ಪಕ್ಷದಿಂದ ಸ್ಪರ್ಧಿಸಿರುವ ಅವರನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಬಾರದು ಎಂದು ಮತದಾರರಲ್ಲಿ ಜಾಗೃತಿಗೊಳಿಸಿದರು.

ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ , ರಾಜ್ಯ ಸಂಘಟನಾ ಸಂಚಾಲಕರುಗಳಾದ ಎಸ್.ಎನ್.ಮಲ್ಲಪ್ಪ, ಸತ್ಯ ಭದ್ರಾವತಿ, ನಾಗಭೂಷಣ್, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್, ದಿವಾಕರ್, ಪ್ರಸನ್ನಕುಮಾರ್, ರಘುನಾಥ್, ಹೆಚ್.ಆರ್.ಮಹಮದ್ ಆಲಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು