ಚಿತ್ರದುರ್ಗ:   ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಕೋಡಿಹಳ್ಳಿ ಗ್ರಾಮದ ಇಬ್ಬರಿಗೆ ಕೋವಿಡ್-19 ವೈರಸ್ ಸೋಂಕು ಇರುವುದು ಶುಕ್ರವಾರದ ವರದಿಯಲ್ಲಿ ದೃಢಪಟ್ಟಿದ್ದು, ಪಿ-993 ಹೆಣ್ಣು (03 ವರ್ಷ) ಹಾಗೂ ಪಿ-994 ಗಂಡು (39 ವರ್ಷ) ಆಗಿದ್ದು, ತಂದೆ ಮತ್ತು ಮಗಳಿಗೆ ಸೋಂಕು ಕಂಡುಬಂದಿದೆ.  ತಮಿಳುನಾಡಿನ ಚೆನ್ನೈ ನಿಂದ ಮೇ. 05 ರಂದು ಖಾಸಗಿ ವಾಹನದಲ್ಲಿ ಗ್ರಾಮಕ್ಕೆ ಆಗಮಿಸಿದ್ದು, ಇವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರ ಮಾಹಿತಿ ಸಂಗ್ರಹಿಸಿ, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ನಾಲ್ವರು ಸದಸ್ಯರ ಕುಟುಂಬ ಚೆನ್ನೈನಿಂದ ಬೆಂಗಳೂರು ಮೂಲದ ಖಾಸಗಿ ವಾಹನದ ಮೂಲಕ ತಮ್ಮ ಸ್ವಗ್ರಾಮ ಕೋಡಿಹಳ್ಳಿ ಗ್ರಾಮಕ್ಕೆ ಮೇ. 05 ರಂದು ಆಗಮಿಸಿತ್ತು.  ಇವರು ಅನುಮತಿ ಪಡೆದಿದ್ದರೆ ಅಥವಾ ಇಲ್ಲವೆ ಎಂಬುದರ ಬಗ್ಗೆ ದಾಖಲೆಯನ್ನು ಪರಿಶೀಲಿಸಲಾಗುತ್ತಿದೆ.  ಹೊರ ರಾಜ್ಯ ಅಥವಾ ಹೊರ ಜಿಲ್ಲೆಯಿಂದ ಬರುವವರ ಮಾಹಿತಿ ಸಂಗ್ರಹಿಸುವ ಸಲುವಾಗಿ ನೇಮಕವಾಗಿರುವ ಇಲ್ಲಿನ ರ್ಯಾಪಿಡ್ ರೆಸ್ಪಾನ್ಸ್ ತಂಡವು, ಚೆನ್ನೈನಿಂದ ಬಂದ ಕುಟುಂಬದ ಬಗ್ಗೆ ಮಾಹಿತಿ ಪಡೆದು, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿತು.  ಈ ಹಿನ್ನೆಲೆಯಲ್ಲಿ ಮೇ. 11 ರಂದು ಕುಟುಂಬ ಸದಸ್ಯರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಯಿತು.  ಇದೀಗ ಮೇ. 15 ರಂದು ಈ ಕುಟುಂಬ ಸದಸ್ಯರ ಪೈಕಿ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.  ಸೋಂಕಿತನ ಪತ್ನಿಯ ವರದಿ ನೆಗೆಟಿವ್ ಬಂದಿದ್ದು, ಇವರ 20 ದಿನದ ಮಗುವಿನ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.  ಈ ನಡುವೆ ಸೋಂಕಿತ ವ್ಯಕ್ತಿ ಕೋಡಿಹಳ್ಳಿ ಸಮೀಪ 03 ಕಿ.ಮೀ. ದೂರದ ಚಿಕ್ಕೆಹಳ್ಳಿ ಗ್ರಾಮದ ಬಂಧುಗಳ ಮನೆಗೆ ಹೋಗಿ ಬಂದಿರುವುದಾಗಿ ತಿಳಿದುಬಂದಿದ್ದು, ಹೀಗಾಗಿ ಕೋಡಿಹಳ್ಳಿ, ಚಿಕ್ಕೇಹಳ್ಳಿ ಸೇರಿದಂತೆ 05 ಕಿ.ಮೀ. ವ್ಯಾಪ್ತಿಯನ್ನು ಕಂಟೈನ್‍ಮೆಂಟ್ ಝೋನ್ ಆಗಿ ಗುರುತಿಸಿ, ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.  ಅಲ್ಲದೆ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.  ಅಲ್ಲದೆ ವಾಹನ ಚಾಲಕನ ಕುರಿತೂ ಮಾಹಿತಿ ಸಂಗ್ರಹಿಸಲಾಗುತ್ತದೆ.  ರ್ಯಾಪಿಡ್ ರೆಸ್ಪಾನ್ಸ್ ತಂಡದ ಕಾರ್ಯವೈಖರಿಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರೆಲ್ಲರನ್ನು ಗುರುತಿಸಿ, ಅವರಿಗೆ ರೋಗ ಲಕ್ಷಣ ಇರಲಿ, ಇಲ್ಲದಿರಲಿ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲು ನಿರ್ಧರಿಸಲಾಗಿದೆ.  ಸದ್ಯ ಸೋಂಕಿತ ವ್ಯಕ್ತಿಯ ಪತ್ನಿ ಹಾಗೂ 20 ದಿನದ ಮಗುವನ್ನು ಕೂಡ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಇಲ್ಲಿನ ರ್ಯಾಪಿಡ್ ರೆಸ್ಪಾನ್ಸ್ ತಂಡದ ಉತ್ತಮ ಕಾರ್ಯದಿಂದ ಸಂಭವಿಸಬಹುದಾದ ತೊಂದರೆಯನ್ನು ತಪ್ಪಿಸಿದಂತಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.