ಚಿತ್ರದುರ್ಗ:ಎ.ಪಿ.ಎಂ.ಸಿ.ವರ್ತಕ ಬುರುಜನಹಟ್ಟಿಯ ಡಿ.ಬಿ.ನರಸಿಂಹಪ್ಪ ಮತ್ತು ಮಕ್ಕಳು ಕಳೆದ ೪೫ ವರ್ಷಗಳಿಂದಲೂ ಕೋಟೆಯೊಳಗೆ ಕೋತಿಗಳಿಗೆ ಪ್ರತಿ ಶನಿವಾರ ಮೊಸರನ್ನ ಬಾಳೆಹಣ್ಣು ನೀಡುತ್ತ ಸದ್ದುಗದ್ದಲವಿಲ್ಲದೆ ವಾನರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ.
ಕೋಟೆಯೊಳಗಿರುವ ಅಕ್ಕ-ತಂಗಿ ಹೊಂಡದ ಸಮೀಪವಿರುವ ಬಂಡೆಯ ಮೇಲೆ ಹೋಗಿ ಡಿ.ಬಿ.ಹನುಮಂತಪ್ಪ ಮತ್ತು ಮಕ್ಕಳು ಗೇರ್ ಗೇರ್ ಎಂದು ಕೂಗಿ ಕರೆದೊಡನೆ ಬಂಡೆಗಳ ಮೇಲಿಂದ ಹತ್ತಾರು ಕೋತಿಗಳು ಬಂದು ಮೊಸರನ್ನ ಮತ್ತು ಬಾಳೆಹಣ್ಣಿನ ರುಚಿ ಸವಿಯುತ್ತವೆ. ವಿಶೇಷವೆಂದರೆ ಪ್ರತಿ ಯುಗಾದಿ ಹಬ್ಬದಲ್ಲಿ ಕೋತಿಗಳಿಗೂ ಹೋಳಿಗೆ ಊಟ ನೀಡುತ್ತಾರೆ.
ಪ್ರತಿ ವಾರವೂ ಕೋಟೆಗೆ ವಾಯುವಿಹಾರಕ್ಕೆ ಹೋಗುವಾಗ ಕೆಲವೊಮ್ಮೆ ಕೋತಿಗಳು ತಿನ್ನಲು ಆಹಾರವಿಲ್ಲದೆ ರೋದಿಸುತ್ತಿದ್ದುದನ್ನು ನೋಡಿ ಏನಾದರೂ ಆಹಾರ ಕೊಡಬೇಕೆಂದು ಮನಸ್ಸು ಮಾಡಿ ಅಂದಿನಿಂದ ಇಲ್ಲಿಯವರೆಗೂ ಒಂದು ಶನಿವಾರವೂ ತಪ್ಪದೆ ವಾನರಗಳಿಗೆ ಮೊಸರನ್ನ ಅಕ್ಕಿ ಬೆಲ್ಲ ಮಿಶ್ರಣದಿಂದ ಸಿದ್ದಪಡಿಸುವ ಪೊಂಗಲ್ ನೀಡುತ್ತಿದ್ದೇವೆ. ಮೊದಲು ನಮ್ಮ ತಂದೆ ಡಿ.ಬೊಮ್ಮಪ್ಪ ಕೋತಿಗಳಿಗೆ ಆಹಾರ ನೀಡುವುದನ್ನು ಆರಂಭಿಸಿದರು. ಅವರ ಪ್ರೇರಣೆಯಿಂದ ನಾನು ಕೋತಿಗಳಿಗೆ ಆಹಾರ ನೀಡಲು ಮುಂದಾದೆ. ಈಗ ನನ್ನ ಮಕ್ಕಳಾದ ಬಿ.ಎನ್.ಚಂದ್ರಶೇಖರ್, ಬಿ.ಎನ್.ವೆಂಕಟೇಶ್, ಬಿ.ಎನ್.ರಂಗನಾಥ್ ಇವರುಗಳು ಪ್ರತಿ ಶನಿವಾರ ವಾನರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಹಿರಿಯರಿಂದ ಆರಂಭಗೊಂಡ ಈ ಪದ್ದತಿ ನಮ್ಮ ಕುಟುಂಬದಲ್ಲಿ ಮಕ್ಕಳು ಮುಂದುವರೆಸಿಕೊಂಡು ಹೋಗಲಿ ಇದರಿಂದ ನನ್ನ ಮನಸ್ಸಿಗೆ ನೆಮ್ಮದಿಯಾಗಿದೆ ಎಂದು ಡಿ.ಬಿ.ನರಸಿಂಹಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.