ಚಿತ್ರದುರ್ಗ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಂಡಿದ್ದು ಯಾವುದೇ ಅಡೆತಡೆಗಳಿಲ್ಲದೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಸದಾಶಿವ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಕೃಷಿ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿದೆ. ಕೃಷಿಗೆ ಸಂಬಂಧಪಟ್ಟಂತೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳು ಕೊರತೆಯಾಗದಂತೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 22 ಕೃಷಿ ಯಂತ್ರಧಾರೆಗಳು, ಮತ್ತು 22 ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿರುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿಗೆ ಅಗತ್ಯವಿರುವ ಬೀಜ, ಗೊಬ್ಬರ, ಪೋಷಕಾಂಶ, ಕೀಟನಾಶಕಗಳು ಲಭ್ಯವಿರುತ್ತವೆ. ಹಾಗೂ ಸಹಕಾರ ಸಂಘಗಳ ಮೂಲಕ ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಖಾಸಗಿ ಬೀಜ, ಗೊಬ್ಬರ, ರಾಸಾಯಿನಿಕ ಅಂಗಡಿ ಮಳಿಗೆಗಳು ಸಹ ತೆರೆಯುವಂತೆ ಸೂಚನೆ ನೀಡಲಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ 8000 ಮೆಟ್ರಿಕ್ ಟನ್ ರಸಗೊಬ್ಬರ ಕಾಪು ದಾಸ್ತಾನು ಮಾಡಲಾಗಿದೆ ಹಾಗೂ 5000 ಮೆಟ್ರಿಕ್ ಟನ್ ಯೂರಿಯಾ, 6000 ಮೆಟ್ರಿಕ್ ಟನ್ ಡಿಎಪಿ ದಾಸ್ತಾನಿದೆ. ರೈತರು ತಮಗೆ ಬೇಕಾದ ಕೃಷಿ ಪರಿಕರಗಳನ್ನು ಪಡೆಯಬಹುದು ಹಾಗೂ ಖರೀದಿಸಬಹುದಾಗಿದೆ. ಕೃಷಿಗೆ ಅಗತ್ಯವಿರುವ ಪರಿಕರ, ರಾಸಾಯಿನಿಕ, ರಸಗೊಬ್ಬರ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಲಭ್ಯವಿದ್ದು ಬಳಕೆ ಮಾಡಿಕೊಳ್ಳಬುದಾಗಿದೆ. ಕೃಷಿ ಹಟ್ಟುವಳಿಗಳನ್ನು ಮಾರಾಟ ಮಾಡಲು ಈಗಾಗಲೇ ಜಿಲ್ಲೆಯ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ತೆರೆಯಲಾಗಿರುತ್ತದೆ. ಹಾಗೂ ಬೆಂಬಲ ಬೆಲೆಯಲ್ಲಿನ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಕಡಲೆ ಖರೀದಿ ಮಾಡಲಾಗುತ್ತಿದೆ.

ಕೃಷಿ ಮಾರುಕಟ್ಟೆಗೆ ತಮ್ಮ ಹಟ್ಟುವಳಿ ತೆಗೆದುಕೊಂಡು ಹೋಗಲು, ಬೀಜ, ಗೊಬ್ಬರ ತೆಗೆದುಕೊಂಡು ಬರಲು ಯಾವುದೇ ಅಡೆತಡೆಗಳಿರುವುದಿಲ್ಲ. ಆದರೆ ಜೊತೆಯಲ್ಲಿ ಜೊತೆಗೆ ಆಧಾರ್ ಕಾರ್ಡ್ ಪ್ರತಿ, ಪಹಣಿ, ಮಾರಾಟ ಮಾಡಿದ, ಖರೀದಿಸಿದ ಬಿಲ್ ಪ್ರತಿ ಇಟ್ಟುಕೊಂಡಿರಬೇಕು.

ರಾಜ್ಯ ಮಟ್ಟದಲ್ಲಿ ಕೃಷಿಗೆ ಸಂಬಂಧಿಸಿದಂತೆ ರೈತರ ನೆರವಿಗೆ ಅಗ್ರಿವಾರ್ ರೊಂ, ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು 080-2212818, 22210237 ಸಂಖ್ಯೆಗೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕರೆ ಮಾಡಬಹುದಾಗಿದ್ದು ಇಲ್ಲಿಗೆ ಕರೆ ಮಾಡಿದಲ್ಲಿ ಅಗತ್ಯ ಮಾಹಿತಿ ಒದಗಿಸಲಾಗುತ್ತದೆ. ಇದಲ್ಲದೆ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೂ ಕರೆ ಮಾಡಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಕೋವಿಡ್-19 ತಡೆಗಟ್ಟುವ ಉದ್ದೇಶದಿಂದ ಖರೀದಿಗೆ ಬರುವ ರೈತರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಅಲ್ಲದೇ ಮಾಸ್ಕ್ ಧರಿಸಬೇಕು. ಅನಾವಶ್ಯಕವಾಗಿ ಓಡಾಟ ನಡೆಸಬಾರದು ಎಂದು ತಿಳಿಸಿದ್ದಾರೆ.