ಶಿವಮೊಗ್ಗ: ಕುವೆಂಪು ವಿವಿಯು ಶೈಕ್ಷಣಿಕ ಸಾಧನೆಗಾಗಿ ವಿವಿಧ ಅಂತರರಾಷ್ಟೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳಿಂದ ಉನ್ನತ ಶ್ರೇಯಾಂಕ ಪಡೆದಿರುವುದನ್ನು ಮೆಚ್ಚಿದ ರಾಜ್ಯಪಾಲರು ಹಾಗೂ ವಿವಿಯ ಕುಲಾಧಿಪತಿಗಳಾದ ವಜುಭಾಯಿ ವಾಲಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 24ರಂದು ಕುಲಪತಿ ಪ್ರೊ. ಜೋಗನ್ ಶಂಕರ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ಶ್ರೇಯಾಂಕ ಪಟ್ಟಿ (ಎನ್‌ಐಆರ್‌ಎಫ್)ಯಲ್ಲಿ ೭೮ನೇ ಸ್ಥಾನಗಳಿಸುವ ಮೂಲಕ ಕುವೆಂಪು ವಿಶ್ವವಿದ್ಯಾಲಯ ಇಡೀ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರತಿಷ್ಠಿತ ‘ದಿ ನಾಲೆಡ್ಜ್ ರಿವ್ಯೂ’ ನಿಯಕಾಲಿಕೆಯು ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಕಲೆ ಮತ್ತು ವಾಣಿಜ್ಯ ನಿಕಾಯಗಳ ಟಾಪ್ 10 ಸ್ಫೂರ್ತಿಯುತ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹಾಗೂ ಬ್ರಿಕ್ಸ್ ದೇಶಗಳ ಅತ್ಯುನ್ನತ 200 ವಿವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಸ್ಥಾನ ಗಳಿಸಿರುವುದನ್ನು ಶ್ಲಾಘಿಸಿದ್ದಾರೆ.

ಇತರೆ ವಿಶ್ವವಿದ್ಯಾಲಯಗಳಿಗೆ ಕುವೆಂಪು ವಿಶ್ವವಿದ್ಯಾಲಯದ ಈ ಸಾಧನೆ ಮಾದರಿಯಾಗಲಿ. ಆ ಮೂಲಕ ಶೈಕ್ಷಣಿಕ ರಂಗದಲ್ಲಿ ರಾಜ್ಯಕ್ಕೆ ಹೆಸರು ತಂದು ಕೊಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.