ಚಿತ್ರದುರ್ಗ,:ಕುಡಿತದ ಚಟವು ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ನಿವಾರಿಸಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಚಿತ್ರದುರ್ಗ ತಾಲ್ಲೂಕು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಚಿತ್ರದುರ್ಗ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೮೭೨ನೇ ಮದ್ಯವರ್ಜನ ಶಿಬಿರದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಏಡ್ಸ್ ರೋಗ ಬಂದವರ ಜೊತೆ ಮಾತನಾಡಬಹುದು. ಊಟ ಮಾಡಬಹುದು, ಒಟ್ಟಿಗೆ ಬಾಳಬಹುದು. ಇದರಿಂದ ಇತರರಿಗೆ ಯಾವುದೇ ಪರಿಣಾಮ ಆಗಗುವುಇಲ್ಲ. ಆದರೆ ಕುಡಿತದ ಚಟವಿರುವವರನ್ನು ಜನರು ಹತ್ತಿರ ಸೇರಿಸಲು ಅಸಹ್ಯಪಡುತ್ತಾರೆ ಎಂದರು.
ಕೇವಲ ಒಂದೇ ದಿನದಲ್ಲಿ ಕುಡಿತದ ಚಟವನ್ನು ಬಿಡಿಸಲು ಸಾಧ್ಯವಿಲ್ಲ. ಹಾಗಾಗಿ ಹಂತ ಹಂತವಾಗಿ ಪ್ರಯತ್ನ ನಡೆಸಬೇಕು. ಅವರಿಗೆ ವಿಶೇಷ ಉಪದೇಶ, ತಿಳಿವಳಿಕೆ ನೀಡುವ ಮೂಲಕ ಉತ್ತಮ ಪರಿಸರ ಸೃಷ್ಠಿಸಬೇಕು. ಕುಡಿತದಿಂದ ಬದುಕು ನಿಕೃಷ್ಟವಾಗುತ್ತದೆ. ಹಾಗಾಗಿ ಅವರ ಮನಪರಿವರ್ತನೆ ಮಾಡುವ ಮೂಲಕ ಅವರನ್ನು ಕುಡಿತದ ಚಟದಿಂದ ಹೊರ ತರುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಟಿ.ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಆಧುನಿಕ ದಿನಗಳಲ್ಲಿ ಕುಡಿಯುವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿವಾರಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವ ನಿಟ್ಟನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಳೆದ ೨೦ ವರ್ಷಗಳಿಂದ ಶಿಬಿರ ನಡೆಸುತ್ತಾ ಬಂದಿದೆ. ಮದ್ಯಪಾನ ಚಟಕ್ಕೆ ಒಳಗಾದವರು ಹೆಂಡತಿ, ಮಕ್ಕಳು ಹಾಗೂ ಕುಟುಂಬದ ಬಗ್ಗೆ ಚಿಂತಿಸುವುದಿಲ್ಲ. ಹಾಗಾಗಿ ಹೆಚ್ಚೆಚ್ಚು ಶಿಬಿರಗಳನ್ನು ನಡೆಸುವ ಮೂಲಕ ಜನರನ್ನು ಪಾನಮುಕ್ತರನ್ನಾಗಿ ಮಾಡಬೇಕೆಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಿರ್ದೇಶಕ ಬಿ.ಗಣೇಶ್ ಮಾತನಾಡಿ, ಕಳೆದ ೨೦ ವರ್ಷಗಳಿಂದ ಶಿಬಿರ ನಡೆಸಿಕೊಂಡು ಬರಲಾಗಿದೆ. ಇಂದು ೮೭೨ನೇ ಶಿಬಿರ ನಡೆಸಲಾಗುತ್ತಿದೆ. ಈ ಶಿಬಿರದಲ್ಲಿ ಭಾಗವಹಿಸಿದ ಸುಮಾರು ೫೦ ಸಾವಿರ ಜನರು ಮದ್ಯಪಾನ ಮಾಡುವುದನ್ನು ಬಿಟ್ಟಿದ್ದಾರೆ. ಶಿಬಿರದಲ್ಲಿ ಮನಸ್ಸು, ದೇಹ ಸ್ವಚ್ಛಗೊಳಿಸಲಾಗುವುದು. ಇದು ಯಾರ ವಿರುದ್ಧವೂ ಅಲ್ಲ. ಹಾಗಾಗಿ ಹೆಚ್ಚಿನ ಜನರು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀರ್ಥಪ್ರಸಾದ್, ಬೆಸ್ಕಾಂ ಷಣ್ಮುಖಪ್ಪ, ನಾಗರಾಜ ಸಂಗಂ, ಯೋಗಗುರು ಚಿನ್ಮಯಾನಂದ, ಹಾಸ್ಯಕವಿ ಜಗನ್ನಾಥ್, ರೂಪಾ ಜನಾರ್ಧನ್, ಮೋಕ್ಷ ರುದ್ರಸ್ವಾಮಿ, ಪ್ರದೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಗೌರ್‍ಮಮ ಪ್ರಾರ್ಥಿಸಿದರು. ಯೋಜನಾಧಿಕಾರಿ ಪ್ರದೀಪ್ ಸ್ವಾಗಿತಿಸಿದರು. ಮೇಲ್ವಿಚಾರಕರಾದ ವೈಶಾಲಿ ಕಾರ್ಯಕ್ರಮ ನಿರೂಪಿಸಿ, ಸಂತೋಷ್ ವಂದಿಸಿದರು. ಶಿಬಿರದಲ್ಲಿ ಸುಮಾರು ೬೦-೭೦ ಮದ್ಯವ್ಯಸನಿಗಳು ಭಾಗವಹಿಸಿದ್ದರು.