ಚಿತ್ರದುರ್ಗ: ಪ್ರತಿಯೊಂದು ಗಿಡದ ಎಲೆ, ಕಾಂಡ, ಬೇರುಗಳಲ್ಲಿ ಔಷಧೀಯ ಗುಣಗಳಿರುತ್ತವೆ. ಅಂತಹ ಗಿಡಗಳನ್ನು ಬಳಸಿಕೊಂಡು ವಿವಿಧ ಬಗೆಯ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಔಷಧೀಯ ವಿಜ್ಞಾನದ ಪ್ರಾಧ್ಯಾಪಕರು(ಗೋವಾ) ಸತ್ತೂರು, ಧಾರವಾಡದ ಪ್ರೊ.ಸುಭಾಸ್ ಚ.ಮಾರೀಹಾಳ ಹೇಳಿದರು.

ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನದ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‌ನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಚಿತ್ರದುರ್ಗ ಪರಿಸರದ ಔಷಧೀಯ ಸಸ್ಯಗಳು ಹಾಗೂ ಖನಿಜಗಳು ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.

ಚಿತ್ರದುರ್ಗದ ಚಂದ್ರವಳ್ಳಿ, ಜೋಗಿಮಟ್ಟಿ, ಆಡುಮಲ್ಲೇಶ್ವರ, ಬೆಟ್ಟ-ಗುಡ್ಡ, ಕುರುಮರಡಿಕೆರೆ, ಇಂಗಳದಾಳ್ ನಲ್ಲಿ ಸುತ್ತಾಡಿದ್ದೇನೆ. ನಾನು ಹೋದ ಕಡೆಗೆಲ್ಲಾ ಸಾಕಷ್ಟು ಔಷಧೀಯ ಸಸ್ಯಗಳು ಹಾಗೂ ಖನಿಜಗಳು ಕಂಡು ಬಂದವು. ಯಾವುದೇ ಗಿಡಮೂಲಿಕೆಯ ಔಷಧಿ ಮನುಷ್ಯನ ದೇಹಕ್ಕೆ ನಾಟಬೇಕಾದರೆ ನೀರು ಇಲ್ಲವೇ ಎಣ್ಣೆಯಲ್ಲಿ ಮಿಶ್ರಣವಾಗಬೇಕು. ಅಥವಾ ಜೇನುತುಪ್ಪ ಹಾಲಿನಲ್ಲಿಯಾದರೂ ಬೆರೆಸಿ ಸೇವಿಸಬೇಕು. ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲವೂ ಇದೆ ಸದುಯಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಎದೆನೋವು ಕಾಣಿಸಿಕೊಂಡಾಗ ಗಣಿಕೆ ಸೊಪ್ಪು, ಕರಿಕಾಚಿ ಸೊಪ್ಪನ್ನು ಕಷಾಯ ಮಾಡಿ ಕುಡಿದಾಗ ನೋವು ಕಡಿಮೆಯಾಗುತ್ತದೆ. ಆಡುಸೋಗೆ ಎಲೆ ಕುದಿಸಿ ಕುಡಿದರೆ ಅಸ್ತಮ ದೂರವಾಗುತ್ತದೆ. ನೀರುಬ್ರಾಹ್ಮಿ ಗಿಡದ ಎಲೆಯನ್ನು ಕುದಿಸಿ ಕಷಾಯ ಮಾಡಿ ಕುಡಿದರೆ ಗಂಡು ಹೆಣ್ಣಿನಲ್ಲಿ ಹಾರ್ಮೊನ್‌ಗಳು ವೃದ್ದಿಯಾಗುತ್ತದೆ ಎಂದು ಔಷಧೀಯ ಗುಣಗಳುಳ್ಳ ಸಸ್ಯಗಳ ಮಹತ್ವವನ್ನು ತಿಳಿಸಿದರು.
ನೆಗ್ಲಿ ಮುಳ್ಳಿನ ಗಿಡದ ಎಲೆಯ ಕಷಾಯ ಮಾಡಿ ಸೋಸಿ ಕುಡಿದಾಗ ಕಿಡ್ನಿಯಲ್ಲಿರುವ ಕಲ್ಲು ಕೂಡ ಕರುಗಲಿದೆ. ದಾಳಿಂಬೆ ಹಣ್ಣಿನ ಮೇಲಿರುವ ಸಿಪ್ಪೆ ತೆಗೆದು ಒಣಗಿಸಿ ಪುಡಿ ಮಾಡಿ ಮೊಸರಿನಲ್ಲಿ ಕಲಸಿಟ್ಟು ಸಂಜೆ ಕುರಿ ಮೇಕೆ ಜಾನುವಾರುಗಳಿಗೆ ಕುಡಿಸಿದರೆ ಹೊಟ್ಟೆಯಲ್ಲಿರುವ ಜಂತುಗಳು ನಾಶವಾಗುತ್ತದೆ. ಲೋಳೆಸರದ ರಸದಿಂದ ಜಾನುವಾರುಗಳ ಮೇಲಿರುವ ಉಣ್ಣೆಯನ್ನು ತೆಗೆಯಬಹುದು. ಶರಾವತಿ ಗಿಡದ ಸೊಪ್ಪಿಗೆ ಶಕ್ತಿವರ್ಧಕ ಶಕ್ತಿಯಿದೆ. ಅಶ್ವಗಂಧ ರಕ್ತದೊತ್ತಡ ಕಡಿಮೆಯಾಗಲು ಒಳ್ಳೆಯ ಔಷಧಿ. ನುಗ್ಗೆ, ನೆಲ್ಲಿಕಾಯಿ ಗಿಡದಿಂದ ಲಿವರ್ ಪ್ರಾಬ್ಲಂ ಕಡಿಮೆ ಮಾಡಿಕೊಳ್ಳಬಹುದು. ತುಂಬೆ ಗಿಡದ ಸೊಪ್ಪನ್ನು ಅರೆದು ಬುದ್ದಿ ಭ್ರಮಣೆಯಾದವರ ತಲೆ ಬೋಳಿಸಿ ಸವರಿ ನಂತರ ಸ್ನಾನ ಮಾಡಿಸಬೇಕು. ಭೀಮಸಮುದ್ರದ ಸುತ್ತಮುತ್ತ ಮ್ಯಾಂಗನೀಸ್ ಮೈನ್ಸ್ ಇದೆ. ಅದರಿಂದಲೂ ಸಾಕಷ್ಟು ಪ್ರಯೋಜನಗಳಿವೆ. ರಸಸಿದ್ದರಿಂದ ಗಿಡಮೂಲಿಕೆಗಳ ಔಷಧಿಗಳು ಆರಂಭಗೊಂಡವು. ಚಿತ್ರದುರ್ಗದ ಇತಿಹಾಸದಂತೆ ವಿಜ್ಞಾನಕ್ಕೂ ಇಲ್ಲಿ ಇತಿಹಾಸವಿದೆ. ನಮ್ಮ ಆಹಾರ ಪದ್ದತಿ, ಔಷಧಿ, ಹಬ್ಬ ಹರಿದಿನಗಳಲ್ಲಿ ಏನೇನು ಸೇವಿಸಬೇಕು. ಯಾವ ಆಹಾರ ಎಷ್ಟು ಬೇಕೋ ಅಷ್ಟು ಮಿತವಾಗಿ ಸೇವಿಸಿದರೆ ಯಾವ ಕಾಯಿಲೆಯೂ ಮನುಷ್ಯನಿಗೆ ಬರುವುದಿಲ್ಲ. ಕೆಲವರಿಗೆ ಮನೋರೋಗದಿಂದ ನಾನಾ ರೀತಿಯ ಬೇನೆಗಳು ಕಾಡುತ್ತವೆ. ಹಾಗಾಗಿ ಯಾವುದನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳದೆ ಸಕಾರಾತ್ಮಕವಾಗಿ ಚಿಂತಿಸಿದಾಗ ಮಾತ್ರ ಸಾಕಷ್ಟು ಕಾಯಿಲೆಗಳಿಂದ ಮನುಷ್ಯ ದೂರವಿರಬಹುದು ಎಂದು ಹೇಳಿದರು.

ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಪ್ರೊ.ಲಕ್ಷ್ಮಣ್‌ತೆಲಗಾವಿ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ರೇಣುಕಮ್ಮ ಶಿವಣ್ಣ, ಸಾಹಿತಿ ಬಿ.ಎಲ್.ವೇಣು, ಶ್ರೀಶೈಲಾರಾಧ್ಯ, ಡಾ.ರಾಮಚಂದ್ರನಾಯಕ, ಪ್ರಾಧ್ಯಾಪಕ ಕರಿಯಪ್ಪ ಮಾಳಿಗೆ, ಡಿ.ಗೋಪಾಲಸ್ವಾಮಿ ನಾಯಕ, ನಿರಂಜನದೇವರಮನೆ, ಷರೀಫಾಬಿ, ಮಲ್ಲಿಕಾರ್ಜುನಾಚಾರ್, ಎಸ್.ಆರ್.ಗುರುನಾಥ್, ರಾಮಜ್ಜ, ಮೃತ್ಯುಂಜಯಪ್ಪ, ಅಹೋಬಲನಾಯಕ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.