ಬಳ್ಳಾರಿ: -ಮಹಾನಗರ ಪಾಲಿಕೆ ವ್ಯಾಪ್ತಿಯ ೨೪ನೇ ವಾರ್ಡಿನಲ್ಲಿ ತೆರೆದ ಚರಂಡಿ ಕಾಮಗಾರಿ ವಿಳಂಬವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಕೌಲ್ ಬಜಾರ್ ಮೊದಲ ಗೇಟಿನ ಮಹಮ್ಮದೀಯ ಶಾಲೆಯ ಬಳಿ ಪ್ರತಿಭಟನಾರ್ಥವಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಮಹಾನಗರ ಪಾಲಿಕೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ.

ಬಿಜೆಪಿ ಸದಸ್ಯರಿರುವ ವಾರ್ಡುಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಇದರಿಂದ ಜನರಿಂದ ಆಯ್ಕೆಯಾದ ನಾವು ನಾಗರಿಕರಿಗೆ ಏನು ಉತ್ತರಿಸಬೇಕು? ಎಂದು ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಅಸಹಾಯಕರಾಗಿದ್ದಾರೆ. ಈ ಕುರಿತು ಶಾಸಕರು, ಮಹಾನಗರ ಪಾಲಿಕೆ ಮಹಾಪೌರರು ಮತ್ತು ಆಯುಕ್ತರಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ೨೪ನೇ ವಾರ್ಡಿನಲ್ಲಿ ತೆರೆದ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ. ಬೀದಿ ದೀಪಗಳಿಲ್ಲ. ಸ್ವಚ್ಛತೆ ಇಲ್ಲ. ಬಿಜೆಪಿ ಸದಸ್ಯರೆಂಬ ಕಾರಣಕ್ಕೆ ಯಾವುದೇ ಅಭಿವೃದ್ಧಿ ಕೆಲಸಗಳು ತಮ್ಮ ವಾರ್ಡಿನಲ್ಲಿ ಆಗುತ್ತಿಲ್ಲ. ಕನಿಷ್ಟ ಸೊಳ್ಳೆ ನಾಶಕ ಸಿಂಪರಣೆ ಔಷಧಿ ಸಹಿತ ಪ್ರೋಕ್ಷಣೆ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಈ ಹಿಂದೆ ಖುದ್ದಾಗಿ ನಾನೇ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದ್ದೇನೆ. ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದೇನೆ. ತಮ್ಮ ವಾರ್ಡಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಆಡಳಿತ ಇತ್ತ ಗಮನಹರಿಸಬೇಕೆಂಬ ಕಾರಣಕ್ಕೆ ಈ ಉಪವಾಸ ಸತ್ಯಾಗ್ರಹ ಕೈಗೊಂಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನೂರ್ ಬಾಷಾ ಸೇರಿದಂತೆ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.