ಚಿತ್ರದುರ್ಗ: ಕಾನ್ಸಿರಾಂರವರ ಚಳುವಳಿ ನಿಂತಿರುವುದು ನೈತಿಕತೆ, ಜ್ಞಾನ, ಸ್ವಾಭಿಮಾನದ ಮೇಲೆ ಹಾಗಾಗಿ ಅವರ ಚಿಂತನೆಗಳಿಗೆ ಎಂದಿಗೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ.ಮಹೇಶ್ ದಲಿತ ಸಮುದಾಯಕ್ಕೆ ಕರೆ ನೀಡಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಬಹುಜನ ಸಮಾಜ ಪಾರ್ಟಿಯ ನೇತಾರ ಕಾನ್ಸಿರಾಂರವರ ೮೪ ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ದಲಿತರಲ್ಲಿ ನೈತಿಕತೆ ಜ್ಞಾನ ಎರಡು ಕಡಿಮೆಯಾದರೆ ಕಾನ್ಸಿರಾಂರವರ ಚಳುವಳಿಯನ್ನು ಮುಂದೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಸ್ವಾಭಿಮಾನದಿಂದ ಮಾತ್ರ ಅವರ ಚಳುವಳಿಯ ಗಟ್ಟಿತನ ಉಳಿಯುತ್ತದೆ. ಕರ್ನಾಟಕಲ್ಲಿ ಬಹುಜನ ಪಾರ್ಟಿಯೊಂದಿಗೆ ಮೈತ್ರಿ ರಾಜಕಾರಣ ಆರಂಭವಾಗಿರುವ ಈಗಿನ ಸಂದರ್ಭದಲ್ಲಿ ಕಾನ್ಸಿರಾಂರವರ ಚಿಂತನೆಗೆ ಎಲ್ಲಿಯೂ ಅವಮಾನವಾಗುವ ರೀತಿಯಲ್ಲಿ ದಲಿತರು ನಡೆದುಕೊಳ್ಳಬಾರದು. ಯಾವುದೇ ರಾಜಕೀಯ ಪಕ್ಷಗಳ ಬಳಿ ಹೋಗಿ ನಿಂತುಕೊಂಡು ಅವರುಗಳು ತೋರುವ ಆಸೆ ಆಮಿಷಗಳಿಗೆ ಬಲಿಯಾಗುವುದರಿಂದಲೂ ಕಾನ್ಸಿರಾಂರವರ ಚಳುವಳಿಗೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ಎಚ್ಚರಿಸಿದರು.

ಕಾನ್ಸಿರಾಂ ಎಂದರೆ ದೊಡ್ಡ ಶಿಖರ, ಸ್ವಾಭಿಮಾನದ ಪರ್ವತವಿದ್ದಂತೆ. ನೈತಿಕತೆ, ಜ್ಞಾನ, ಸ್ವಾಭಿಮಾನ ಕಳೆದುಕೊಂಡರೆ ಬ್ರಾಹ್ಮಣ ಶಾಹಿಯನ್ನು ಓಡಿಸಲು ಸಾಧ್ಯವಿಲ್ಲ ಎಂಬುದು ಕಾನ್ಸಿರಾಂರವರ ಚಿಂತನೆಯಾಗಿತ್ತು. ಚಳುವಳಿಯ ಮೂಲಕವೇ ದಲಿತರನ್ನು ಮೇಲಕ್ಕೆತ್ತಬಹುದು ಎನ್ನುವ ಸಂದೇಶವನ್ನು ನೀಡಿದ್ದ ಕಾನ್ಸಿರಾಂರವರ ತತ್ವ ಸಿದ್ದಾಂತ ಚಿಂತನೆಗಳನ್ನು ನಿಜವಾಗಿಯೂ ಗೌರವಿಸುವುದಾದರೆ ದುಡಿದ ಹಣದಲ್ಲಿ ಸ್ವಲ್ಪ ಭಾಗ, ಸಮಯ, ಬುದ್ದಿಯನ್ನು ಚಳುವಳಿಗೆ ಮೀಸಲಿಡಿ ಎಂದು ತಿಳಿಸಿದರು.

ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಎನ್.ದೊಡ್ಡೆಟ್ಟಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಸಂಯೋಜಕರುಗಳಾದ ಮಹಾಂತೇಶ್, ಕೆ.ತಿಮ್ಮಣ್ಣ, ಶಿವಮೂರ್ತಿ, ಉಪಾಧ್ಯಕ್ಷರುಗಳಾದ ಗುರುಶಾಮಯ್ಯ, ಸುಂದರೇಶ್, ಕೆ.ರುದ್ರಮುನಿ, ಎನ್.ಪ್ರಕಾಶ್, ದೇವೀರಮ್ಮ, ಜಗದೀಶ್, ಹನುಮಂತಪ್ಪ, ಮಂಜುನಾಥ್, ಸಿದ್ದಪ್ಪ, ವಿಶ್ವಾನಂದ, ಗುರು, ಪ್ರಶಾಂತ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಾನ್ಸಿರಾಂರವರ ಜಯಂತಿ ಅಂಗವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.

 

ಜಾಹೀರಾತು……..

———————————————-