ಚಿತ್ರದುರ್ಗ: ಮೂರು ಬಾರಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರವರನ್ನು ಸೋಲಿಸಿರುವ ಕಾಂಗ್ರೆಸ್‍ಗೆ ದಲಿತರ ಬಳಿ ಹೋಗಿ ಮತ ಕೇಳುವ ನೈತಿಕ ಹಕ್ಕು ಇಲ್ಲ ಎಂದು ಚಳ್ಳಕೆರೆ ನಗರಸಭೆ ಮಾಜಿ ಸದಸ್ಯ, ದಲಿತ ನಾಯಕ ಹಾಗೂ ಬಿಜೆಪಿ.ಮುಖಂಡ ಎಂ.ಶಿವಮೂರ್ತಿ ಖಾರವಾಗಿ ಪ್ರಶ್ನಿಸಿದರು.

ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಬಿಜೆಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎ.ನಾರಾಯಣಸ್ವಾಮಿ ಪರವಾಗಿ ಚಳ್ಳಕೆರೆ ತಾಲೂಕು ಟಿ.ಎನ್.ಕೋಟೆ, ಗೋಸಿಕೆರೆ, ಬೀರನಹಳ್ಳಿ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಎಂ.ಶಿವಮೂರ್ತಿ ಅಂಬೇಡ್ಕರ್ ಬದುಕಿದ್ದಾಗ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡದ ಕಾಂಗ್ರೆಸ್‍ನವರು ನಿಧನದ ನಂತರ ಮರಣೋತ್ತರವಾಗಿ ಭಾರತ ರತ್ನ ನೀಡಿದರು. ಈಗ ಅಂಬೇಡ್ಕರ್ ಹೆಸರೇಳಿಕೊಂಡು ದಲಿತರ ಮನೆಬಾಗಿಲಿಗೆ ಹೋಗಿ ಯಾವ ಮುಖವಿಟ್ಟುಕೊಂಡು ಮತ ಕೇಳುತ್ತಾರೆ ಹಾಗಾಗಿ ಈ ಬಾರಿಯ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಅಭ್ಯರ್ಥಿ ನಾರಾಯಣಸ್ವಾಮಿರವರನ್ನು ಬಹುಮತಗಳಿಂದ ಗೆಲ್ಲಿಸಿ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಿ ಎಂದು ದಲಿತರಲ್ಲಿ ಮನವಿ ಮಾಡಿದರು.

ಬಿಜೆಪಿ.ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆಯಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್‍ನವರು ಅಂಬೇಡ್ಕರ್ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಆಗ ಅಂಬೇಡ್ಕರ್‍ರವರ ಪಾರ್ಥಿವ ಶರೀರವನ್ನು ಬಾಂಬೆಗೆ ತರಲಾಯಿತು. ಕಾಂಗ್ರೆಸ್ ಉರಿಯುವ ಮನೆ ಅಲ್ಲಿಗೆ ದಲಿತರು ಹೋಗಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ದಲಿತರಿಗೆ ಕೆರೆ ನೀರು ಕುಡಿಯಲು ಬಿಡಲಿಲ್ಲ. ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ಕೊಡದವರು ಕಾಂಗ್ರೆಸ್‍ನವರು. ಸ್ವಾತಂತ್ರ ಹೋರಾಟಕ್ಕಷ್ಟೆ ಕಾಂಗ್ರೆಸ್ ಇರಬೇಕು ನಂತರ ವಿಸರ್ಜಿಸಿ ಎಂದು ರಾಷ್ಟ್ರಪಿತ ಮಹಾತ್ಮಗಾಂಧಿಯವರೆ ಹೇಳಿದ್ದರು ಎಂದು ಎಂ.ಶಿವಮೂರ್ತಿ ದಲಿತರನ್ನು ಜಾಗೃತಿಗೊಳಿಸಿದರು.

ನಾಲ್ಕುವರೆ ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರಮೋದಿ ಅಂಬೇಡ್ಕರ್ ನಿಧನವಾದ ಸ್ಥಳವನ್ನು 150 ಕೋಟಿ ರೂ.ಖರ್ಚು ಮಾಡಿ ಮ್ಯೂಸಿಯಂ ಮಾಡಿದ್ದಾರೆ. ಅವರು ತಂಗಿದ್ದ ಮನೆಯನ್ನು ಲೈಬ್ರರಿ ಮಾಡಿ ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಗೌರವಿಸಿದ್ದಾರೆ. ಅರವತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‍ನವರು ಪಾರ್ಲಿಮೆಂಟ್‍ನಲ್ಲಿ ಅಂಬೇಡ್ಕರ್ ಫೋಟೋ ಹಾಕಿರಲಿಲ್ಲ. ವಿ.ಪಿ.ಸಿಂಗ್ ಪ್ರಧಾನಿಯಾದ ಮೇಲೆ ಬಿಜೆಪಿ.ಯವರ ಬೆಂಬಲ ಪಡೆದು ಸಂಸತ್‍ನಲ್ಲಿ ಅಂಬೇಡ್ಕರ್ ಫೋಟೋ ಹಾಕಿ ಸಂವಿಧಾನಶಿಲ್ಪಿಗೆ ಗೌರವ ನೀಡಿದರು ಎಂದರು.

ಐದು ವರ್ಷಗಳ ಕಾಲ ಚಿತ್ರದುರ್ಗ ಲೋಕಸಭಾ ಸದಸ್ಯರಾಗಿದ್ದ ಬಿ.ಎನ್.ಚಂದ್ರಪ್ಪನವರಿಂದ ದಲಿತರಿಗೆ ಯಾವ ಕೊಡುಗೆಯೂ ಇಲ್ಲ. ದಲಿತ ಕಾಲೋನಿಗೆ ಎಷ್ಟು ಬಾರಿ ಭೇಟಿ ಕೊಟ್ಟು ಸಮಸ್ಯೆಗಳನ್ನು ಆಲಿಸಿದ್ದಾರೆ. ಎ.ಕೆ.ಕಾಲೋನಿಗೆ ಮೂಗು ಮುಚ್ಚಿಕೊಂಡು ಹೋಗುವ ಬಿ.ಎನ್.ಚಂದ್ರಪ್ಪನವರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಬಿಜೆಪಿ.ಯ ನಾರಾಯಣಸ್ವಾಮಿಯನ್ನು ಪಾರ್ಲಿಮೆಂಟ್‍ಗೆ ಕಳಿಸಿಕೊಡುವ ಮೂಲಕ ನರೇಂದ್ರಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡುವಂತೆ ದಲಿತರಲ್ಲಿ ವಿನಂತಿಸಿದರು.
ಕಾಂತರಾಜು, ಹನುಮಂತರಾಯ, ಪಂಚಾಕ್ಷರಿ, ಸುರೇಶ, ತಿಮ್ಮಣ್ಣ ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.