ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ದೊಡ್ಡಮಲ್ಲಯ್ಯ ವಿರುದ್ಧ
ಕಸಾಪ ತಾಲೂಕು ಘಟಕಗಳು ಆಕ್ರೋಶ ಹೊರಹಾಕಿದ್ದು, ಚಿತ್ರದುರ್ಗ ತಾಲೂಕು ಕಸಾಪ ಅಧ್ಯಕ್ಷ ರಾಮಲಿಂಗ ಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಇತ್ತ ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆ ಹಾಗೂ ಜಿಲ್ಲಾ ಕಸಾಪ ನಿಷ್ಕ್ರಿಯತೆಯಾಗಿ ಇರುವುದನ್ನು ಖಂಡಿಸಿ ಜೂನ್ ೧೬ ರ ಶನಿವಾರ ಖುದ್ದು ಸಾಹಿತಿಗಳು ಹಾಗೂ ಕಸಾಪ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿವೆ. ಮಾಜಿ ಅಧ್ಯಕ್ಷರಾಗಿದ್ದ ಕೆ.ಎಂ. ವೀರೇಶ್ ಹಾಗೂ ಮಲ್ಲಿಕಾರ್ಜುನಯ್ಯ ಅವರ ಅವಧಿಯಲ್ಲಿ ಸಕ್ರಿಯವಾಗಿದ್ದ ಕಸಾಪ ಡಾ. ದೊಡ್ಡಮಲ್ಲಯ್ಯ ಅವರ ಆಗಮನದಿಂದಾಗ ಸಂಪೂರ್ಣ ನೆಲ ಕಚ್ಚಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲಾಧ್ಯಕ್ಷ ಡಾ. ದೊಡ್ಡಮಲ್ಲಯ್ಯ ಅವರು ಸಾಹಿತಿಗಳ ಹೆಸರಿನ ಮೇಲೆ ವಿಧಾನಸಭಾ ಚುನಾವಣೆಗೆ ನಿಂತು ಕೇವಲ ೩೪೩ ಮತಗಳಿಸಿ ಹೀನಾಯ ಸೋಲು ಕಂಡಿದ್ದು ಇದು ಕಸಾಪಕ್ಕೆ ಆದ ಅವಮಾನವಾಗಿದೆ. ಅತ್ತ
ಕಸಾಪದಲ್ಲಿನ ಮುನಿಸು, ಒಳಜಗಳಗಳು ಈ ಬೀದಿಗೆ ಬಂದಿದ್ದು ಕಸಾಪ ಸ್ವಚ್ಚ ಅಭಿಯಾನಕ್ಕೆ ಸದಸ್ಯರೇ ನಿಲ್ಲಬೇಕಿದೆ. ಹೀಗಾಗಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕಸಾಪ ಸದಸ್ಯ, ಹಾಸ್ಯ ಸಾಹಿತಿ ಜಗನ್ನಾಥ್ ಮನವಿ ಮಾಡಿದ್ದಾರೆ.