ಚಿತ್ರದುರ್ಗ: ಕನ್ನಡವನ್ನು ಅಂತರಾಷ್ಟ್ರೀಯ ಭಾಷಾ ದಿನವನ್ನಾಗಿ ಆಚರಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಸೋಮವಾರ ಕೆನರಾ ಬ್ಯಾಂಕ್ ಹಾಗೂ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಲ್ಲಿನ ಉದ್ಯೋಗಿಗಳಿಗೆ ಸಿಹಿ ತಿನ್ನಿಸುವ ಮೂಲಕ ಮನವಿ ಮಾಡಿದರು.

ಸೆ.೧೪ ನ್ನು ಅಂತರಾಷ್ಟ್ರೀಯ ಹಿಂದಿ ದಿನವನ್ನಾಗಿ ಘೋಷಿಸಿರುವ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಾಕಾರರು ಕೆನರಾ ಬ್ಯಾಂಕ್‌ನಲ್ಲಿ ಕೆಲವರಿಗೆ ಮಗ್ಗಿಪುಸ್ತಕಗಳನ್ನು ವಿತರಿಸಿ ಕಡ್ಡಾಯವಾಗಿ ಕನ್ನಡ ಕಲಿಯುವಂತೆ ಒತ್ತಾಯ ಮಾಡಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ ಹಿಂದಿಗೆ ಕೇವಲ ಇನ್ನೂರು ವರ್ಷಗಳ ಇತಿಹಾಸವಿದೆ. ಅದೇ ಕನ್ನಡ ಭಾಷೆ ಎರಡುವರೆ ಸಾವಿರ ವರ್ಷಗಳ ಇತಿಹಾಸ ಹೊಂದಿದ್ದರೂ ಅಂತರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವಲ್ಲಿ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಕನ್ನಡಿಗರಿಗೆ ಅವಮಾನ ಮಾಡಿದಂತಾಗಿದೆ. ನಾವುಗಳು ಈ ರೀತಿಯ ಭಾಷ ವಿರೋಧಿ ನೀತಿಯನ್ನು ಸಹಿಸುವುದಿಲ್ಲ. ಏಳು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಸಿಕ್ಕಿದೆ ಎನ್ನುವುದನ್ನು ಆಳುವ ಸರ್ಕಾರಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು, ಅಂಚೆ ಕಚೇರಿ, ರೈಲು ನಿಲ್ದಾಣ ಸಿಬ್ಬಂದಿಗಳು, ಅಧಿಕಾರಿಗಳು ಆಡಳಿತ ಭಾಷೆ, ವ್ಯವಹಾರಿಕ ಭಾಷೆಯಾಗಿ ಕನ್ನಡವನ್ನು ಬಳಸಬೇಕು. ಈ ರಾಜ್ಯದಲ್ಲಿದ್ದುಕೊಂಡು ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳುವವರು ಅನ್ಯ ಭಾಷೆಗಳಿಗೆ ಉತ್ತೇಜನ ನೀಡಲು ಅವಕಾಶ ಕೊಡುವುದಿಲ್ಲವೆಂದು ಎಚ್ಚರಿಸಿದರು.

ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಉಪಾಧ್ಯಕ್ಷ ಹರೀಶ್, ನಗರಾಧ್ಯಕ್ಷ ತಿಪ್ಪೇಸ್ವಾಮಿ, ಮಹಿಳಾ ಘಟಕದ ಜಲ್ಲಾಧ್ಯಕ್ಷೆ ವೀಣ ಗೌರಣ್ಣ, ಯುವ ಘಟಕದ ಜಿಲ್ಲಾಧ್ಯಕ್ಷ ಬಿ.ಅನಿಲ್, ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ವೆಂಕಟೇಶ್, ಓಬಳೇಶ್, ಧನರಾಜ್, ತರುಣ್, ವೈ.ರವಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.