ಚಿತ್ರದುರ್ಗ: ಕಳೆದ೨೬ ರಿಂದ ಕಣಿವೆಮಾರಮ್ಮ ಜಾತ್ರೆ ಆರಂಭಗೊಂಡಿದ್ದು, ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣವೆ ಮಾರಮ್ಮನ ಭವ್ಯ ಮೆರವಣಿಗೆ ಗುರುವಾರ ನಗರದ ರಾಜಬೀದಿಗಳಲ್ಲಿ ಸಾಗಿತು.
ಹೂವಿನಿಂದ ಅಲಂಕೃತಗೊಂಡಿದ್ದ ಬೆಳ್ಳಿ ರಥದಲ್ಲಿ ಕಣಿವೆಮಾರಮ್ಮನನ್ನು ಕಂಗೊಳಿಸುವಂತೆ ಸಿಂಗರಿಸಿ ಮೆರವಣಿಗೆ ಮಾಡಲಾಯಿತು. ಡೊಳ್ಳು, ತಮಟೆಯೊಂದಿಗೆ ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನಗರ ಠಾಣೆ ಆವರಣದಿಂದ ಹೊರಟ ಮೆರವಣಿಗೆ ಬಸವಮಂಟಪ, ರಂಗಯ್ಯನಬಾಗಿಲು, ಚಿಕ್ಕಪೇಟೆ, ದೊಡ್ಡಪೇಟೆ, ಆನೆಬಾಗಿಲು, ಗಾಂಧಿವೃತ್ತದ ಮೂಲಕ ದೇವಸ್ಥಾನಕ್ಕೆ ಮರಳಿತು. ಶಾರದ ಬ್ರಾಸ್ ಬ್ಯಾಂಡ್‌ನವರು ಭಕ್ತಿ ಗೀತೆಗಳನ್ನು ಹಾಡಿದರು.
ಜಾತ್ರೆಯ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಬಾಳೆಕಂದುಗಳಿಂದ ಸಿಂಗರಿಸಲಾಗಿದೆ.

ಕಣಿವೆಮಾರಮ್ಮ ಯುವಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಆರ್.ಮೂರ್ತಿ, ಬಸಮ್ಮ, ಇನ್ನು ಮುಂತಾದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.