ಚಿತ್ರದುರ್ಗ: ಓಬಿರಾಯನ ಕಾಲದ ಹಳೆ ಪಿ.ಯು.ಕಾಲೇಜು ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳು ಪಾಠ ಕಲಿಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳು ಕಳೆದರೂ ಒಂದು ಕಾಲೇಜು ಪ್ರೌಢಶಾಲೆಯನ್ನು ಹೊಸದಾಗಿ ಆರಂಭಿಸಿಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಆಪಾದಿಸಿದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಕ್ರೀಡಾ, ಸಾಂಸ್ಕೃತಿಕ, ರೋವರ್‍ಸ್ ಹಾಗೂ ಎನ್.ಎಸ್.ಎಸ್.ಘಟಕ ಮತ್ತು ಹೊಸ ಕೊಠಡಿ, ಪ್ರಯೋಗಾಲವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಇತಿಹಾಸವಿದೆ. ನೂರು ವರ್ಷಗಳ ಹಳೆಯದಾಗಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಆದರೆ ಕೊಠಡಿಗಳ ಕೊರತೆ ಇದೆ. ಅದೇ ರೀತಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿಯೂ ಕೊಠಡಿಗಳ ಕೊರತೆ ಇರುವುದನ್ನು ಗಮನಿಸಿ ಒಂದು ಕೋಟಿ ಹದಿನೈದು ಲಕ್ಷ ರೂ.ವೆಚ್ಚದಲ್ಲಿ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಆರ್.ಐ.ಡಿ.ಎಫ್.ಯೋಜನೆಯಡಿ ಇನ್ನು ಒಂದು ಕೋಟಿ ರೂ.ಬಿಡುಗಡೆಯಾಗಿದೆ ಎಂದು ಹೇಳಿದರು.
ಗಣಿಭಾದಿತ ಪ್ರದೇಶಗಳ ಅಭಿವೃದ್ದಿಗೆ ನಾಲ್ಕು ಸಾವಿರ ಕೋಟಿ ರೂ.ಮೀಸಲಿದೆ. ಆ ಹಣದಲ್ಲಿ ಶಾಲಾ-ಕಾಲೇಜು ಕಟ್ಟಡ ನಿರ್ಮಿಸಲು ಮೂರು ಕೋಟಿ ರೂ.ಗಳನ್ನು ನೀಡಬೇಕೆಂಬ ಆದೇಶ ಇದೆ. ಶಾಲಾ ಆವರಣದಲ್ಲಿ ಗಿಡಗಳನ್ನು ಬೆಳೆಸಿದರೆ ಮಕ್ಕಳ ಮನಸ್ಸಿಗೆ ಖುಷಿ ನೀಡಿದಂತಾಗುತ್ತದೆಯಲ್ಲದೆ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿದಂತಾಗುತ್ತದೆ ಎಂದರು.
ಹತ್ತು-ಹದಿನೈದು ವರ್ಷದ ಹಿಂದೆ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಿತ್ತು. ಎರಡು ಮೂರು ವರ್ಷಗಳಿಂದ ಮಕ್ಕಳ ಹಾಜರಾತಿ ಏರಿಕೆಯಾಗಿದೆ. ಆಟ ಪಾಠಗಳ ಜೊತೆ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ ಅತ್ಯಂತ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ ಶಾಸಕರು ಚಿತ್ರದುರ್ಗದ ಜನಸಂಖ್ಯೆ ಈಗ ಮೂರು ಲಕ್ಷ ದಾಟಿರುವುದರಿಂದ ಹೊಸದಾಗಿ ಶಾಲಾ-ಕಾಲೇಜುಗಳನ್ನು ರಾಜ್ಯ ಸರ್ಕಾರ ಆರಂಭಿಸಬೇಕು ಎಂದು ಆಗ್ರಹಿಸಿದರು.
ಭಾರತದಲ್ಲಿರುವಂತ ಯುವಶಕ್ತಿ ಬೇರೆ ಯಾವ ದೇಶದಲ್ಲಿಯೂ ಇಲ್ಲ. ನಮ್ಮ ದೇಶದ ಮಕ್ಕಳನ್ನು ಎಲ್ಲಾ ದೇಶದ ಪ್ರಧಾನಿಗಳು ಹಾಗೂ ರಾಷ್ಟ್ರಪತಿಗಳು ಹೊಗಳುವುದುಂಟು. ವಿಜ್ಞಾನ ತಂತ್ರಜ್ಞಾನದಲ್ಲಿ ಭಾರತದ ಮಕ್ಕಳು ಬೇರೆ ದೇಶಗಳ ಮಕ್ಕಳಿಗಿಂತ ಮುಂದೆ ಇದ್ದಾರೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿನ ತಾರತಮ್ಯ ನಿವಾರಣೆಗಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಬೈಸಿಕಲ್, ಕ್ಷೀರಭಾಗ್ಯ ನೀಡುತ್ತಿದೆ. ಇವೆಲ್ಲನ್ನು ಬಳಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜೀವನಕ್ಕೆ ಬಹಳ ಪ್ರಾಮುಖ್ಯತೆ ಇರುವುದರಿಂದ ಶಿಕ್ಷಣ ಕೇವಲ ಅಂಕಪಟ್ಟಿಗೆ ಮೀಸಲಾಗಬಾರದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಎದೆಗುಂದಿ ಆತ್ಮಹತ್ಯೆ ಮಾತ್ರ ಮಾಡಿಕೊಳ್ಳಬೇಡಿ. ನಿಮ್ಮ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಂಡಿರುವ ತಂದೆ ತಾಯಿಗಳ ಮನಸ್ಸನ್ನು ನೋಯಿಸಬೇಡಿ ಎಂದು ಮನವಿ ಮಾಡಿದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಬಿ.ಲಕ್ಷ್ಮಿನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಎಸ್.ಜೆ.ಎಂ.ಕಾನೂನು ಕಾಲೇಜು ಪ್ರಾಚಾರ್ಯರಾದ ಕೆ.ಎನ್.ವಿಶ್ವನಾಥ್, ಶಿಕ್ಷಕಿ ರಾಜೇಶ್ವರಿ, ಹಾಸ್ಯ ಕವಿ ಜಗನ್ನಾಥ, ಜಾನಪದ ಹಾಡುಗಾರ ಗಂಜಿಗಟ್ಟೆ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.
ಉಪನ್ಯಾಸಕ ಚನ್ನಬಸಪ್ಪ ನಿರೂಪಿಸಿದರು.