ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ನೋಡಲು ಸಂತೆಹೊಂಡದ ಕಡೆಯಿಂದ ಬರುವ ಪ್ರವಾಸಿಗಳಿಗೆ ಮೊದಲು ಕಣ್ಣಿಗೆ ಬೀಳುವ ಮೊದಲ ಸುತ್ತಿನ ಮಹಾದ್ವಾರ ಆನೆಬಾಗಿಲು ನಿರ್ಲಕ್ಷೆಗೊಳಗಾಗಿರುವುದನ್ನು ರಕ್ಷಣೆ ಮಾಡಬೇಕೆಂದು ಸಾಹಿತಿ ಡಾ.ಬಿ.ಎಲ್.ವೇಣು ರಾಜ್ಯ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಜಿ. ಪ್ರಹ್ಲಾದ್‌ರವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮೊದಲು ಕಾಣುವುದೇ ಸಿದ್ದಯ್ಯನಬಾಗಿಲು. ಎತ್ತರವಾಗಿ ಚೌಕಾಕಾರದಲ್ಲಿ ಭವ್ಯವಾಗಿ ನಿರ್ಮಿಸಿರುವ ದ್ವಾರವನ್ನು ಆನೆಬಾಗಿಲು ಎಂದೂ ಪಾಳೆಯಗಾರರು ಕರೆದಿದ್ದರು. ಆನೆ ಅಂಬಾರಿ ಓಡಾಡುವಷ್ಟು ಎತ್ತರ ವಿಶಾಲವಾಗಿರುವ ಇಂತಹ ಇತಿಹಾಸ ಪ್ರಸಿದ್ದ ಸ್ಮಾರಕದ ಮೇಲ್ಬಾಗದಲ್ಲಂತೂ ಪುಟ್ಟ ಕಾಡೇ ಬೆಳೆದು ಕೋಟೆಯ ಕಲ್ಲುಗಳನ್ನು ಸಡಲಿಸಿ ಕೋಟೆಯ ಕುಸಿತಕ್ಕೆ ಕಾರಣವಾಗುವಷ್ಟರ ಮಟ್ಟಿಗೆ ಬೃಹಧಾಕಾರದ ಬೇವಿನ ಮರ ಬೇಕಾಬಿಟ್ಟಿಯಾಗಿ ಬೆಳೆದುಬಿಟ್ಟಿದೆ. ಕೆಳಗಿರುವ ಪ್ರಾಚೀನ ಕುದುರೆಲಾಯವಂತು ತಿಪ್ಪೇಗುಂಡಿಯಂತಾಗಿದ್ದರು. ಜನಪ್ರತಿನಿಧಿಗಳಾಗಲಿ, ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳಾಗಲಿ ಗಮನ ಹರಿಸಿ ಸ್ಮಾರಕಗಳನ್ನು ರಕ್ಷಣೆ ಮಾಡದಿರುವುದು ನೋವಿನ ಸಂಗತಿ ಎಂದು ಡಾ.ಬಿ.ಎಲ್.ವೇಣು ಮನವಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಹೈದರಾಲಿಯು ದುರ್ಗವನ್ನು ಗೆದ್ದು ಆನೆಬಾಗಿಲು ದ್ವಾರದ ಮೂಲಕವೇ ಪ್ರವೇಶಿಸಿದ್ದರಿಂದ ಜಯದ ಬಾಗಿಲು(ಫತಾ ದರ್‍ವಾಜ) ಎಂದೂ ಕರೆದಿದ್ದುಂಟು. ಇಂತಹ ಮಹಾದ್ವಾರದ ಅಕ್ಕಪಕ್ಕವನ್ನೆಲ್ಲಾ ಸದ್ಭಕ್ತರುಗಳು ಒತ್ತುವರಿ ಮಾಡಿಕೊಂಡು ದೈವಭಕ್ತಿ ಮೆರೆದರೂ ಯಾರು ಪ್ರಶ್ನಿಸಿಲ್ಲ. ಇವೆಲ್ಲಾ ನಮ್ಮ ಹೆಮ್ಮೆಯ ಪ್ರಾಚೀನ ನಿಧಿಗಳೆಂಬ ಅರಿವೇ ಜನಪ್ರತಿನಿಧಿಗಳಿಗೆ ಇದ್ದಂತಿಲ್ಲ. ಕೋಟೆಯ ಸಾಲುಗಳ ನಡುವೆ ಗಿಡಮರಗಳನ್ನು ಬೆಳೆಸಿ ಕೋಟೆಯನ್ನೇ ಕಾಣದಂತೆ ಮಾಡಿರುವ ಪರಿಸರ ಪ್ರೇಮಿಗಳನ್ನಾಗಲಿ, ಅನುಮತಿಸಿದ ಇಲಾಖಾಧಿಕಾರಿಗಳನ್ನಾಗಲಿ ಇದುವರೆವಿಗೂ ಯಾರು ಪ್ರಶ್ನಿಸಿದ್ದೇ ಇಲ್ಲ. ಕೋಟೆಯ ಮೇಲಿರುವ ದೇವಾಲಯಗಳ ಸುತ್ತ ಗ್ರಿಲ್‌ಗಳನ್ನು ಹಾಕಿ ಪ್ರಾಚೀನತೆಯನ್ನೇ ಅಣಕಿಸಿದರೂ ಕೇಳುವವರಿಲ್ಲದಂತಾಗಿದೆ.
ಅಪರೂಪದ ಸ್ಮಾರಕಗಳಾದ ಉಚ್ಚಂಗಿ ಹೊಂಡದ ದ್ವಾರ, ಗಾರೆಬಾಗಿಲುಗಳು, ಈಗಾಗಲೆ ಅಲಕ್ಷಕ್ಕೆ ಒಳಗಾಗಿ ಮುಚ್ಚಲ್ಪಟ್ಟಿವೆ. ಉತ್ತರದಲ್ಲಿನ ಊರಿನ ಪ್ರವೇಶದ್ವಾರವನ್ನಾದರೂ ಸಂರಕ್ಷಿಸದಿದ್ದರೆ ಮುಂದಿನ ಪೀಳಿಗೆ ಪುರಾತತ್ವ ಇಲಾಖೆಯವರನ್ನು ಕ್ಷಮಿಸಲಾರರು. ಆದಷ್ಟು ಶೀಘ್ರವಾಗಿ ಸ್ಮಾರಕಗಳನ್ನು ಸಂರಕ್ಷಿಸಬೇಕೆಂದು ಡಾ.ಬಿ.ಎಲ್.ವೇಣು ಮನವಿ ಮಾಡಿದರು.
ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಈ ಸಂದರ್ಭದಲ್ಲಿ ಹಾಜರಿದ್ದರು.