ಚಿತ್ರದುರ್ಗ: ಕೋವಿಡ್-19 ತುರ್ತು ಪರಿಸ್ಥಿತಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಟುಂಬಗಳಿಗೆ ಆಹಾರ ಧಾನ್ಯದ ಕೊರತೆಯಾಗದಂತೆ ಏಪ್ರಿಲ್ ಮತ್ತು ಮೇ ಎರಡು ತಿಂಗಳಿನ ಪಡಿತರವನ್ನು ಏಪ್ರಿಲ್ ತಿಂಗಳಿನಲ್ಲಿಯೇ ಏಕಕಾಲದಲ್ಲಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಮಾರ್ಚ್ 30 ರಿಂದ ಪಡಿತರ ವಿತರಣೆ ಪ್ರಾರಂಭವಾಗಿದ್ದು, ಕಾರ್ಡ್‍ದಾರರಿಗೆ ಬಯೋಮೆಟ್ರಿಕ್ ಬದಲಾಗಿ ಮೊಬೈಲ್ ಓಟಿಪಿ ಮೂಲಕ ವಿತರಿಸಲಾಗುತ್ತಿದೆ. ಪಡಿತರ ಹಂಚಿಕೆಯ ಪ್ರಮಾಣದಲ್ಲಿ ಏಪ್ರಿಲ್ ತಿಂಗಳಿನಿಂದ ಬದಲಾವಣೆಯಾಗಿದ್ದು, ಪಿಹೆಚ್‍ಹೆಚ್ (ಆದ್ಯತಾ) ಕಾರ್ಡ್‍ನ ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿಯಂತೆ ಒಟ್ಟು 10 ಕೆ.ಜಿ ಮತ್ತು ಪ್ರತಿ ಕಾರ್ಡ್ ತಲಾ 2 ಕೆ.ಜಿಯಂತೆ ಒಟ್ಟು 4 ಕೆ.ಜಿ ಗೋದಿ ಉಚಿತವಾಗಿ ವಿತರಿಸಲಾಗುತ್ತಿದೆ.

ಅಂತ್ಯೋದಯ ಕಾರ್ಡ್‍ಗಳಿಗೆ ಅಕ್ಕಿ ತಲಾ 35 ಕೆ.ಜಿ.ಯಂತೆ ಎರಡು ತಿಂಗಳ ಒಟ್ಟು 70 ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತಿದೆ. ಅಂತ್ಯೋದಯ ಕಾರ್ಡ್‍ಗಳಿಗೆ ಗೋದಿ ಹಂಚಿಕೆ ಇರುವುದಿಲ್ಲ. ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಾಬೆಲೆ ಅಂಗಡಿಗಳಲ್ಲಿ ನೂಕುನುಗ್ಗಲಾಗದಂತೆ ಏಪ್ರಿಲ್ ಅಂತ್ಯದವರೆಗೂ ಪಡಿತರ ವಸ್ತುಗಳನ್ನು ನಿಗದಿತವಾಗಿ ಪಡೆಯಬಹುದು. ಈ ಸಂದರ್ಭದಲ್ಲಿ ಕೋರೊನಾ ವೈರಸ್ ಸೋಂಕು ಹರಡದಂತೆ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.