ಚಿತ್ರದುರ್ಗ : ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌ರವರು ಶಾಂತಿಗಾಗಿ ಕ್ರಾಂತಿ ಮಾಡಿದರು. ಅಸಮಾನತೆ ವಿರುದ್ಧ ಅವರು ಬಂಡೆದ್ದರು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ಅಂತರರಾಜ್ಯ ವಿದ್ಯಾರ್ಥಿ ಜೀವನಾನುಭವ ಶಿಬಿರ ಹಾಗು ರಾಷ್ಟ್ರೀಯ ಏಕತಾ ಪ್ರವಾಸ ೨೦೧೮ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಬಸವಣ್ಣನವರು, ಗಾಂಧೀಜಿಯವರು ಅಸ್ಪೃಶ್ಯತೆ ಹೋಗಲಾಡಿಸಲು ಪ್ರಯತ್ನಿಸಿದರು. ಸಮಾಜದಲ್ಲಿ ಜಾತಿ ವ್ಯವಸ್ಥೆ, ವರ್ಣ ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಆದಕಾರಣ ನಾವು ಭಾರತೀಯರು ಎಂಬ ಭಾವನೆ ಬರಬೇಕೆಂಬುದು ಅವರ ನಿಲುವಾಗಿತ್ತು. ಪ್ರತಿಯೊಂದು ಸಮುದಾಯವು ತನ್ನದೇ ಆದ ಮತ, ಧರ್ಮ ಹೊಂದಿರುತ್ತದೆ. ನಿಮ್ಮ ಪ್ರಕಾರ ಧರ್ಮ ಎಂದರೇನು ಎಂಬ ಪ್ರಶ್ನೆಗೆ, ಧರ್ಮ ಎಂದರೆ ಶಾಂತಿ ಪಾಲನೆ ಮುಖ್ಯ ಎಂದರು. ಪ್ರತಿಯೊಂದು ಧರ್ಮದ ಕರ್ತವ್ಯ ಎಂದರೆ ಕಾಯಕ. ಇನ್ನಿತರರಿಗೆ ಒಳ್ಳೆಯದನ್ನು ಮಾಡುವುದು. ಪ್ರತಿಯೊಂದು ಧರ್ಮ, ಪ್ರಾರ್ಥನೆ, ನಮಾಜ್, ಪೂಜೆ ಮೊದಲಾದವುಗಳೊಂದಿಗೆ ಸಮಾಜಕ್ಕೆ ಒಳಿತನ್ನು ಮಾಡುವುದು ಅದರ ಮುಖ್ಯ ಉzಶವಾಗಿರುತ್ತದೆ. ಪ್ರಪಂಚದ ಧರ್ಮವು ಒಳ್ಳೆಯದಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಸ್ವಾಮಿ ವಿವೇಕಾನಂದರು ಕೂಡ ರಾಷ್ಟ್ರೀಯ ಏಕತೆಗೆ ಶ್ರಮಿಸಿದರು. ಅಭಿವದ್ಧಿಯ ಪರವಾಗಿ ಧ್ವನಿ ಎತ್ತಿದರು. ಒಳ್ಳೆಯ ವ್ಯಕ್ತಿ ಒಂದು ದೊಡ್ಡ ವ್ಯಕ್ತಿಯಾಗುತ್ತಾನೆ. ಭಾರತವು ಅಂತಹ ವ್ಯಕ್ತಿಗಳನ್ನು ರೂಪಿಸುವತ್ತ ಪ್ರಯತ್ನಿಸುತ್ತಿದೆ. ನಾವು ಮೊದಲು ಭಾರತೀಯ ಉತ್ತಮ ಪ್ರಜೆಯಾಗಬೇಕು. ನಮ್ಮ ಧರ್ಮದ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಹಾಗಾಗಿ ಬಸವಣ್ಣನವರು ಹೇಳಿದಂತೆ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎನ್ನುವುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಭಾರತದ ತುಂಬ ಕಾನೂನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದರು.

ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಪರಿಷತ್‌ನ ಕೋ-ಆರ್ಡಿನೇಟರ್
ಹೃಷಿಕೇಶ್ ಪಾಂಡೆ ವೇದಿಕೆಯಲ್ಲಿದ್ದರು. ಯಶವಂತಶೆಟ್ಟಿ ನಿರೂಪಿಸಿದರು.