ಚಿತ್ರದುರ್ಗ: ಗ್ರಾಮಾಂತರ ಪ್ರದೇಶದಲ್ಲಿನ ಕೈಗಾರಿಕೆ, ಸೋಲಾರ್ ಘಟಕಗಳು ಹಾಗೂ ವಿದ್ಯುತ್ ಉತ್ಪಾದಕ ವಿಂಡ್ ಮಿಲ್‍ಗಳು ನಿಯಮ ಉಲ್ಲಂಘಿಸಿದಲ್ಲಿ ಪಡೆದ ನಿರಪೇಕ್ಷಣಾ ಪತ್ರವನ್ನು ರದ್ದುಪಡಿಸುವ ಅಧಿಕಾರ ಗ್ರಾಮ ಪಂಚಾಯಿತಿಗಳಿಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2018 ರ ಫೆಬ್ರವರಿ 27 ರಂದು ಹೊರಡಿಸಿದ ಸರ್ಕಾರದ ಸುತ್ತೋಲೆಯ ಪ್ರಕಾರ ಕೈಗಾರಿಕೆಗಳು, ಸೋಲಾರ್ ಘಟಕ ಹಾಗೂ ವಿಂಡ್ ಮಿಲ್‍ಗಳಿಗೆ ಯಾವ ರೀತಿ ಕರ ವಿಧಿಸಬೇಕೆಂದು ನಿಯಗಳನ್ನು ರೂಪಿಸಲಾಗಿದೆ. ನಿಯಮಗಳನ್ವಯ ಪಂಚಾಯಿತಿಯಲ್ಲಿ ಕರ ನಿರ್ಧಾರಣೆ ಮಾಡಿ ವಸೂಲು ಮಾಡಬೇಕಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ಆದಾಯ ಪ್ರಮಾಣ ಹೆಚ್ಚಲಿದ್ದು ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಬಹುದಾಗಿದೆ ಎಂದರು.

ಯಾವುದೇ ಘಟಕವನ್ನು ಸ್ಥಾಪಿಸಲು ಪಂಚಾಯಿತಿಯಿಂದ ನಿರಪೇಕ್ಷಣಾ ಪತ್ರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಸಂದರ್ಭದಲ್ಲಿ ವಿದಿಸಲಾಗುವ ಷರತ್ತುಗಳನ್ನು ಅಂತಹ ಕಂಪನಿಯವರು ಹಾಗೂ ಮಾಲಿಕರು ಪೂರೈಸಲೇ ಬೇಕಾಗುತ್ತದೆ. ಆದ್ದರಿಂದ ಕರ ವಸೂಲು ಮಾಡುವುದು ಸಹ ಆಯಾ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡಬೇಕು ನಿಜ, ಆದರೆ ಅವರು ಉತ್ಪಾದಿಸಿ ವ್ಯವಹರಿಸಿ ಲಾಭ ಗಳಿಸಿದ್ದರೂ ನಿಯಮದಂತೆ ನೀಡಬೇಕಾದ ತೆರಿಗೆಯನ್ನು ಕಟ್ಟಲಿಲ್ಲವೆಂದರೆ ಮೂಲಭೂತ ಸೌಕರ್ಯ ಕಲ್ಪಿಸಿ ಅಭಿವೃದ್ದಿ ಮಾಡುವುದೇಗೆ, ಆದ್ದರಿಂದ ನಿಯಮ ಬದ್ದವಾಗಿ ಕರ, ತೆರಿಗೆ ವಸೂಲು ಮಾಡಲು ತಿಳಿಸಿದರು.