ಚಿತ್ರದುರ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‌ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್, ವಾಸವಿ ವಿದ್ಯಾಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಾಸವಿ ವಿದ್ಯಾಸಂಸ್ಥೆಯಲ್ಲಿ ಎನ್.ಎಂ.ಎಂ.ಎಸ್. ಹಾಗೂ ಎನ್.ಟಿ.ಎಸ್.ಇ. ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಹನ್ನೆರಡು ದಿನಗಳ ಕಾಲ ನಡೆಯುವ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತ ನಗರ ಸೇರಿದಂತೆ ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯ ಮಾಹಿತಿ ಕೊರತೆ ಇರುವುದನ್ನು ಸರಿಪಡಿಸುವುದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುವುದು. ತರಬೇತಿಯಲ್ಲಿ ಶ್ರದ್ದೆಯಿಟ್ಟು ಕಲಿತು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉತ್ತೀರ್ಣರಾಗಿ ಎಂದು ಮಕ್ಕಳಿಗೆ ತಿಳಿಸಿದರು.
ಪ್ರತಿ ವರ್ಷವೂ ಈ ರೀತಿಯ ತರಬೇತಿಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ತೇರ್ಗಡೆಯಾಗದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ವಿದ್ಯಾರ್ಥಿ ವೇತನ ಸಿಗುತ್ತದೆ ಅದನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟದ ವ್ಯಾಸಂಗ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್.ಸುರೇಶ್‌ರಾಜು ಮಾತನಾಡುತ್ತ ಎನ್.ಎಂ.ಎಂ.ಎಸ್., ಎನ್.ಟಿ.ಎಸ್.ಇ. ಪರೀಕ್ಷೆಗಳಿಗೆ ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಸಿಕೊಂಡಿರುವ ವಿದ್ಯಾರ್ಥಿಳಿಗೆ ಉಚಿತ ತರಬೇತಿಯನ್ನು ನೀಡುತ್ತಿದ್ದು. ಇದರ ಪ್ರಯೋಜನ ಪಡೆದುಕೊಂಡು ಮುಂದೆ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗುವುದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಇಂತಹ ತರಬೇತಿಗಳಲ್ಲಿ ಭಾಗವಹಿಸಿ ಕಷ್ಠಪಟ್ಟು ಸಂಪನ್ಮೂಲ ವ್ಯಕ್ತಿಗಳು ಹೇಳುವ ವಿಚಾರಗಳನ್ನು ತಿಳಿದುಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಗುರು-ಹಿರಿಯರು, ಪೋಷಕರುಗಳಿಗೆ ಕೀರ್ತಿ ತನ್ನಿ ಎಂದರು.
ಡಯಟ್ ಪ್ರಾಚಾರ್ಯರಾದ ಲೀಲಾವತಿ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಅರುಣ್‌ಕುಮಾರ್, ಕಾರ್ಯದರ್ಶಿ ರಾಘವೇಂದ್ರ, ಇನ್ನರ್‌ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ಪ್ರತಿಭಾವಿಶ್ವನಾಥ್, ಎಂ.ಕೆ.ರವೀಂದ್ರ, ಮಾರುತಿ ಮೋಹನ್, ಮಹೇಶ್ ವೇದಿಕೆಯಲ್ಲಿದ್ದರು.
ಇನ್ನೂರಕ್ಕೂ ಹೆಚ್ಚು ಮಕ್ಕಳು ತರಬೇತಿಯಲ್ಲಿ ಭಾಗವಹಿಸಿದ್ದರು.