ಚಿತ್ರದುರ್ಗ: ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಯ ಅಭಿವೃದ್ದಿಗಾಗಿ ಬದ್ದತೆ ಹೊಂದಿರುವ ವಿಧಾನಪರಿಷತ್ ಸದಸ್ಯ ರಘುಆಚಾರ್ ಚಿತ್ರದುರ್ಗಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ಬೇರೆ ಕಡೆ ಸ್ಥಳಾಂತರಗೊಂಡರೆ ರಾಜೀನಾಮೆ ನೀಡುವುದಾಗಿ ಹೇಳಿರುವುದು ರಾಜಕೀಯ ಗಿಮಿಕ್ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಅಭಿವೃದ್ದಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ರಮಾನಾಗರಾಜ್ ವ್ಯಂಗ್ಯವಾಡಿರುವುದನ್ನು ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಖಂಡಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ತ್ವರಿತಗತಿಯಲ್ಲಿ ಆಗಬೇಕು ಎನ್ನುವ ಉದ್ದೇಶವಿಟ್ಟುಕೊಂಡಿರುವ ವಿಧಾನಪರಿಷತ್ ಸದಸ್ಯ ರಘುಆಚಾರ್ ಒಂದು ವೇಳೆ ಮೆಡಿಕಲ್ ಕಾಲೇಜನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿದರೆ ರಾಜೀನಾಮೆ ನೀಡಿ ಹೋರಾಟಕ್ಕಿಳಿಯುತ್ತೇನೆ ಎಂದು ಸರ್ಕಾರಕ್ಕೆ ಬೆದರಿಕೆ ಹಾಕಿರುವುದರಲ್ಲಿ ಅವರ ಯಾವ ಸ್ವಾರ್ಥವೂ ಇಲ್ಲ. ಎಲ್ಲಾ ಹೋರಾಟಗಾರರ ಪರಿಶ್ರಮದಿಂದಲೇ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿದೆ ಎಂಬುದನ್ನು ನಾವುಗಳು ಒಪ್ಪಿಕೊಳ್ಳುತ್ತೇವೆ. ಆದ್ದರಿಂದ ರಘು ಆಚಾರ್ ಬಗ್ಗೆ ರಮಾನಾಗರಾಜ್ ಹಗುರವಾಗಿ ಮಾತನಾಡಬಾರದು ಎಂದು ಎಚ್ಚರಿಸಿದರು.

ಚಿತ್ರದುರ್ಗದ ಸಮಗ್ರ ಅಭಿವೃದ್ದಿಗಾಗಿ ಒಂದು ಸಾವಿರದ 100 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಯನ್ನು ಕೋರಿದ್ದಾರೆ. ಭದ್ರಾಮೇಲ್ದಂಡೆ ಯೋಜನೆಯಾಗಲಿ, ಮೆಡಿಕಲ್ ಕಾಲೇಜಿಗಾಗಲಿ ರಘುಆಚಾರ್ ಸದನದ ಒಳಗೆ ಹೋರಾಟ ನಡೆಸುತ್ತಿದ್ದಾರೆ. ಅದೇ ರೀತಿ ರಮಾನಾಗರಾಜ್ ಹೊರಗೆ ಹೋರಾಟ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಯಾರು ರಾಜಕೀಯ ಮಾಡುವುದು ಬೇಡ. ಎಲ್ಲರೂ ಒಂದಾಗಿ ಹೋರಾಟಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಈ ಹಿಂದೆ ರಘುಆಚಾರ್ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದ್ದಾರೆ. ಜಿಲ್ಲೆಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಸಹಿಸದ ಕೆಲವರು ಆಪಾದನೆ ಮಾಡುತ್ತಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಚಿತ್ರದುರ್ಗಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸುವಲ್ಲಿ ನಾನೂ ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಘುಆಚಾರ್‍ಗೆ ಸಮಾಧಾನಪಡಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮರುಳಾರಾಧ್ಯ , ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ, ರಹಮತ್‍ವುಲ್ಲಾ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.