ಚಿತ್ರದುರ್ಗ: ವಿದ್ಯಾವಂತರಾದ ಪ್ರತಿಯೊಬ್ಬರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಬೇಕು. ದೇಶದ ಭವಿಷ್ಯ ಉದ್ಯಮಶೀಲತೆಯಲ್ಲಿದೆ ಎಂದು ಬೆಂಗಳೂರು ಕೆನರಾ ಬ್ಯಾಂಕ್‍ನ ಮಹಾಪ್ರಬಂಧಕ ಎಸ್.ಡಿ.ಬಿರಾದರ್ ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕ್, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗ, ಕೆನರಾ ಬ್ಯಾಂಕ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ನಗರದ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಹಣಕಾಸು ಸಾಕ್ಷರತಾ ಸಪ್ತಾಹ ಅಂಗವಾಗಿ ಗುರುವಾರ “ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಬಗ್ಗೆ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಹೇಮಂತ್ ಕುಮಾರ್ ಮಾತನಾಡಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಕಾಲೇಜಿಗೆ 10 ಕಂಪ್ಯೂಟರ್ ಹಾಗೂ 01 ಪ್ರಿಂಟರ್ ಕೊಡುಗೆಯಾಗಿ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.

ನಬಾರ್ಡ್ ಜಿಲ್ಲಾಭಿವೃದ್ಧಿ ಪ್ರಬಂಧಕರಾದ ಕವಿತಾ, ದಾವಣಗೆರೆ ಕೆನರಾಬ್ಯಾಂಕ್ ಸಹಾಯಕ ಮಹಾಪ್ರಬಂಧಕ ರಘುರಾಜ್,   ಭಾರತೀಯ ರಿಸರ್ವ್ ಬ್ಯಾಂಕ್‍ನ ಮಾರ್ಗದರ್ಶಿ ಜಿಲ್ಲಾ ಅಧಿಕಾರಿ ಆನಂದ್ ಮಾತನಾಡಿದರು.

ಜಿಲ್ಲಾ ಕೈಗಾರಿಕೆ ಕೇಂದ್ರದ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ನಿಂಗೇಗೌಡ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಾಕ್ಷರತಾ ಸಂಯೋಜಕ ಜಿ.ಸಿ.ತಿಮ್ಮಣ್ಣ ಹಾಗೂ ಅಂತಿಮ ವರ್ಷದ ಡಿಪ್ಲೊಮೊ ವಿದ್ಯಾರ್ಥಿಗಳು ಉಪಸ್ಥಿತರಿದ್ದರು