ಚಿತ್ರದುರ್ಗ: 10 ರಂದು ನಡೆಯುವ ಈದ್‌ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಶಾಂತಿ ಸಭೆ ಕರೆಯಲಾಗಿತ್ತು.

ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ ಮಾತನಾಡಿ ಅಂದು ಮಧ್ಯಾಹ್ನ ೧.೩೦ ಕ್ಕೆ ಬಡಾಮಕಾನ್‌ನಿಂದ ಈದ್‌ಮಿಲಾದ್ ಹಬ್ಬದ ಮೆರವಣಿಗೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದರಂತೆ ನಾವುಗಳು ಕೂಡ ಯಾವುದೇ ಸಣ್ಣಪುಟ್ಟ ಘಟನೆಗಳಿಗೂ ಆಸ್ಪದ ನೀಡದೆ ಶಾಂತಿಯುತವಾಗಿ ಹಬ್ಬ ಆಚರಿಸುತ್ತೇವೆಂದು ಇಲಾಖೆಗೆ ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡುತ್ತ ಪ್ರಪಂಚಕ್ಕೆ ಶಾಂತಿಯ ಸಂದೇಶವನ್ನು ಸಾರಿರುವ ಮಹಮದ್ ಪೈಗಂಬರ್‌ರವರ ಹುಟ್ಟುಹಬ್ಬವನ್ನು ಈದ್‌ಮಿಲಾದ್ ಹಬ್ಬವನ್ನಾಗಿ ಆಚರಿಸಲಾಗುವುದು. ಅಂದು ಮಧ್ಯಾಹ್ನ ಹೊರಡುವ ಮೆರವಣಿಗೆ ಯಾವುದೇ ಕಾರಣಕ್ಕೂ ತಡವಾಗಬಾರದು. ಅನೇಕ ಸಾರಿ ರಂಜಾನ್ ಹಾಗೂ ಗಣೇಶ ಹಬ್ಬ ಒಂದೇ ದಿನ ಬಂದಿದೆ. ಆಗ ಹಿಂದೂ-ಮುಸಲ್ಮಾನರು ಶಾಂತಿ ಸೌಹಾರ್ಧತೆಯಿಂದ ಕೂಡಿಕೊಂಡು ಹಬ್ಬವನ್ನು ಆಚರಿಸಿದ್ದೇವೆ. ಸಹಭಾಳ್ವಗೆ ಹೆಸರುವಾಸಿಯಾಗಿರುವ ಐತಿಹಾಸಿಕ ಚಿತ್ರದುರ್ಗದಲ್ಲಿ ಯಾವುದೇ ಕೋಮು ಗಲಭೆಗಳು ನಡೆಯಲು ಆಸ್ಪದ ಕೊಡುವುದಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಕಾನೂನು ರೀತಿಯಲ್ಲಿ ಹಬ್ಬ ಆಚರಣೆ ಹಾಗೂ ಮೆರವಣಿಗೆಯಲ್ಲಿ ಸೂಕ್ತ ಬಂದೋಬಸ್ತ್ ಮಾಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ನ.೧೦ ರಂದು ಈದ್‌ಮಿಲಾದ್ ಜೊತೆ ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ. ೨೦ ನೇ ತಾರೀಖಿನ ನಂತರ ಟಿಪ್ಪು ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದೆ. ಅದಕ್ಕಾಗಿ ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆ ಯಾವ ರೀತಿ ಮಾರ್ಗದರ್ಶನ ನೀಡುತ್ತದೆಯೋ ಅದರಂತೆ ಟಿಪ್ಪು ಜಯಂತಿ ಆಚರಿಸುತ್ತೇವೆ. ಯಾವ ಗೊಂದಲಗಳಿಗೂ ಅವಕಾಶ ನೀಡುವುದಿಲ್ಲ ಎಂದರು.

ಮುಸ್ಲಿಂ ಹಾಸ್ಟೆಲ್ ಆಡಳಿತಾಧಿಕಾರಿ ಮಹಮದ್ ನಾಸಿರುದ್ದೀನ್, ನಿಸಾರ್, ಸೈಯದ್‌ವಲಿಖಾದ್ರಿ, ಮುತುವಲ್ಲಿ ಎಂ.ಸಿ.ಓ.ಬಾಬು, ಚೋಟು, ಡಿ.ವೈ.ಎಸ್ಪಿ, ನಗರಸಭೆ ಪೌರಾಯುಕ್ತ ಇವರುಗಳು ಮಾತನಾಡಿದರು.
ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್, ಹೆಚ್.ಶಬ್ಬೀರ್‌ಭಾಷ, ತಾಹೀರ್, ಟಿ.ಎಂ.ಕೆ.ಮನ್ಸೂರ್, ಸಯೀದು, ಎ.ಸಾಧಿಕ್‌ವುಲ್ಲಾ ಸೇರಿದಂತೆ ಮುಸ್ಲಿಂ ಜನಾಂಗದ ಅನೇಕರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.