ಚಿತ್ರದುರ್ಗ: ಕೋಮು ಸೌಹಾರ್ಧ ವೇದಿಕೆ ಹಾಗೂ ನಾಗರೀಕ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಇ.ವಿ.ಎಂ.ಹಠಾವೋ ದೇಶ ಬಚಾವೊ ಎನ್ನುವ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಪ್ರೊ.ಸಿ.ಕೆ.ಮಹೇಶ್ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಕೋಮುವಾದಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಇ.ವಿ.ಎಂ.ನಿಂದ ಅಕ್ರಮ ನಡೆಯುತ್ತಿದೆ ಎನ್ನುವುದನ್ನು ಮೊದಲಿನಿಂದಲೂ ನಾವುಗಳು ಹೇಳಿಕೊಂಡು ಬರುತ್ತಿದ್ದರೂ ಯಾರು ಗಮನ ಕೊಡುತ್ತಿಲ್ಲ. ಬ್ರಾಹ್ಮಣಶಾಹಿ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯತನಕ ಪ್ರಜಾತಂತ್ರ ಯಶಸ್ವಿಯಾಗುವುದಿಲ್ಲ ಎಂದು ಆಪಾದಿಸಿದರು.

ಬ್ಯಾಲೆಟ್ ಪೇಪರ್‌ನಿಂದ ಮಾತ್ರ ಪಾರದರ್ಶಕ ಚುನಾವಣೆ ನಡೆಯಲು ಸಾಧ್ಯ ಎನ್ನುವುದನ್ನು ಅರಿತ ಕೋಮುವಾದಿಗಳು ಹಠ ಮಾಡಿ ಇ.ಎಂ.ವಿ.ಮೂಲಕ ಚುನಾವಣೆ ನಡೆಸಿ ಅಡ್ಡದಾರಿಯಿಂದ ಅಧಿಕಾರ ಹಿಡಿದಿದ್ದಾರೆ. ಬ್ರಾಹ್ಮಣಶಾಹಿಗಳ ಪರವಾಗಿರುವವರಿಗೆ ದೇಶದ ಅಭಿವೃದ್ದಿ ಬೇಕಾಗಿಲ್ಲ. ಎಲ್ಲಿಯವರೆಗೂ ಇ.ಎಂ.ವಿ.ನಿರ್ಮೂಲನೆಯಾಗುವುದಿಲ್ಲವೋ ಅಲ್ಲಿಯತನಕ ಭ್ರಷ್ಠಾಚಾರವನ್ನು ಹೋಗಲಾಡಿಸಲು ಆಗುವುದಿಲ್ಲ. ಇದರ ವಿರುದ್ದ ಪ್ರತಿಯೊಬ್ಬರು ಚಿಂತಿಸಬೇಕಾಗಿದೆ ಎಂದು ಹೇಳಿದರು.

ಐತಿಹಾಸಿಕ ಚಿತ್ರದುರ್ಗದಲ್ಲಿ ರಸ್ತೆಗಳೆಲ್ಲಾ ಧೂಳಿನಿಂದ ಕೂಡಿದ್ದು, ಇಡಿ ಪರಿಸರವೇ ಕಲುಷಿತಗೊಂಡಿದೆ. ಇದಕ್ಕೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷೆಯೇ ಕಾರಣ. ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಾರಕ್ಕೊಮ್ಮೆಯಾದರೂ ನಗರದಲ್ಲಿ ನಡೆದಾಡಿದರೆ ಜನಸಾಮಾನ್ಯರು ಅನುಭವಿಸುತ್ತಿರುವ ಕಷ್ಟ ಏನೆಂಬುದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.

ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ಲೇಖಕ ಹೆಚ್.ಆನಂದ್‌ಕುಮಾರ್, ಎನ್.ನಯಾಜ್, ಟಿ.ಶಫಿವುಲ್ಲಾ, ಹನೀಫ್, ಚಿಕ್ಕಣ್ಣ ಇನ್ನು ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.