ಚಿತ್ರದುರ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಜನಾಂಗದ ಸಭೆ ನಡೆಸಿದ್ದಾರೆ ಎಂದುಕೊಂಡು ಸ್ಥಳೀಯ ಚುನಾವಣಾಧಿಕಾರಿಗಳು ದೂರು ದಾಖಲಿಸಿರುವುದು ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ.

ಲೋಕಸಭೆಗೆ ಸ್ಪರ್ಧಿಸಲು ಭೋವಿ ಸಮುದಾಯಕ್ಕೆ ಟಿಕೇಟ್ ನೀಡಬೇಕೆಂದು ಭೋವಿ ಸಮುದಾಯದ ಮುಖಂಡರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಚಿತ್ರದುರ್ಗ ನಗರದಲ್ಲೇ ಬೃಹತ್ ಪ್ರತಿಭಟನೆ ರ್ಯಾಲಿಯನ್ನು ನಡೆಸಿದ್ದರು. ಸಮುದಾಯಕ್ಕೆ ಟಿಕೆಟ್ ಸಿಗದಿದ್ದ ಪಕ್ಷದಲ್ಲಿ ಚುನಾವಣೆ ವಿಷಯದಲ್ಲಿ ಯಾವ ನಿರ್ಣಯ ಕೈಗೊಳ್ಳಬೇಕೆಂಬುದನ್ನು ಸಮುದಾಯದ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ರ್ಯಾಲಿಯ ಸಂದರ್ಭದಲ್ಲಿ ತೀರ್ಮಾನಿ ಸಲಾಯಿತು.

ಅದೇ ಪ್ರಕಾರ ರಾಜ್ಯಮಟ್ಟದ ಭೋವಿ ಮುಖಂಡರ ಚಿಂತನಮಂಥನ ಸಭೆಯನ್ನು ಗುರುಪೀಠದ ಆವರಣವನ್ನು ಹೊರತುಪಡಿಸಿದ ಜಾಗದಲ್ಲಿ ಸಭೆ ನಡೆಸಿರುತ್ತಾರೆ. ಸಮುದಾಯದ ಹಿತಾಸಕ್ತಿಯಿಂದ ಕೆಲವು ನಿರ್ಣಯಗಳನ್ನು ತೆಗೆದು ಕೊಂಡಿರುತ್ತಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮತಚಲಾಯಿಸುವುದು ಸಮುದಾಯದ ಮತದಾರರ ವಿವೇಚನೆಗೆ ಬಿಡಲಾಯಿತು. ಜೊತೆಗೆ ಉಳಿದ ಲೋಕಸಭಾ ಕ್ಷೇತ್ರದಲ್ಲಿ ಆಯಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸ್ಪರ್ಧಾಳುಗಳು ಇಷ್ಟವಾಗದಿದ್ದಲ್ಲಿ ನೋಟಾಕ್ಕೆ ಮತ ಚಲಾಯಿಸಬಹುದು, ಆದರೆ ಕಡ್ಡಾಯ ಮತದಾನ ಮಾಡಬೇಕು. ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದ ರಾಜಕೀಯ ಪಕ್ಷಗಳಿಗೆ ಭೋವಿ ಸಮುದಾಯ ಅಸಮಧಾನ ಭಾವನೆ ಮನವರಿಕೆಮಾಡುವ ಉದ್ದೇಶ ಹೊಂದಲಾಗಿತ್ತು.

ಇದು ಹಿಂದುಳಿದ ಭೋವಿ ಹಾಗೂ ಜೊತೆಗೆ ಇರುವ 99 ಜಾತಿಗಳ ರಾಜಕೀಯ ಅಸ್ಮಿತೆಯ ಪ್ರಶ್ನೆಯಾಗಿದ್ದರಿಂದ ಇಂತಹದೊಂದು ನಿರ್ಧಾರ ಕೈಗೊಳ್ಳಬೇಕಾಯಿತು. ನಿರ್ಧಾರವನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ಕೈಗೊಳ್ಳಲಾಗಿದೆ. ಇಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡುವ ಉದ್ದೇಶವೇ ಇಲ್ಲ. ಸಭೆಯಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲಿಸಬೇಕೆಂದಾಗಲೀ ಯಾವುದೇ ಪಕ್ಷವನ್ನು ತಿರಸ್ಕರಿಸಬೇಕೆಂದಾಗಲಿ, ನಿರ್ಣಯಗಳು ಕೈಗೊಂಡಿಲ್ಲ. ಆದ್ದರಿಂದ ಆಯೋಗದ ಸ್ಥಳೀಯ ಅಧಿಕಾರಿಗಳು ಸಭೆಯ ಬಗ್ಗೆ ತಪ್ಪು ಮಾಹಿತಿ ಬರುವಂತೆ ಆರೋಪಿಸಿ ದೂರು ದಾಖಲು ಮಾಡಲಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ದೂರನ್ನು ರದ್ದುಪಡಿಸಬೇಕು ಎಂದು ನಾವೆಲ್ಲ ಒತ್ತಾಯಿಸುತ್ತೇವೆ.
ರಾಜಕೀಯ ವ್ಯಕ್ತಿಗಳು, ಪಕ್ಷಗಳು ನಡೆಸುವ ಸಭೆಗಳಂತೆ ಧಾರ್ಮಿಕರು ನಡೆಸುವ ಸಭೆಗಳನ್ನು ಪರಿಗಣಿಸಬಾರದು. ಧಾರ್ಮಿಕರಿಗೆ ಸಮುದಾಯದ ಹಿತಾಸಕ್ತಿ ಹೊರತುಪಡಿಸಿ ರಾಜಕೀಯ ಹಿತಾಸಕ್ತಿಗಳು ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ.

ದಲಿತ ಹಿಂದುಳಿದ ಮಠಾದೀಶರ ಒಕ್ಕೂಟ (ರಿ)

ಅಧ್ಯಕ್ಷರ ಪರವಾಗಿ /ಕಾರ್ಯದರ್ಶಿ
ಡಾ.ಶ್ರೀ ಶಾಂತವೀರ ಮಹಾಸ್ವಾಮಿಜಿ

ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಜಿ