ಚಿತ್ರದುರ್ಗ:ಆಧುನಿಕ ಬದುಕಿನಲ್ಲಿ ದೈಹಿಕ ಶ್ರಮ ಸಾಕಷ್ಟು ಕಡಿಮೆಯಾಗಿದ್ದು ಇದರಿಂದ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ರೋಗಗಳನ್ನು ದೂರವಿಡಲು ಸದಾ ಯೋಗಾಭ್ಯಾಸದಿಂದ ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.
ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ, ಪತಂಜಲಿ ಯೋಗ ಸಂಸ್ಥೆ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ, ಆರ್ಟ್ ಆಫ್ ಲೀವಿಂಗ್ ಸಂಸ್ಥೆ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಜನರು ದಿನನಿತ್ಯದ ಕೆಲಸದಲ್ಲಿ ದೈಹಿಕ ಶ್ರಮವನ್ನು ಹೆಚ್ಚು ಮಾಡುತ್ತಿದ್ದರು. ಆದರೆ ಆಧುನಿಕ ಬದುಕಿನಲ್ಲಿ ಅನೇಕ ಯಂತ್ರೋಪಕರಣಗಳು, ಸೌಲಭ್ಯಗಳು ಬಂದಿದ್ದರಿಂದ ಬಹುತೇಕ ದೈಹಿಕ ಶ್ರಮ ಕಡಿಮೆಯಾಗಿದೆ. ಇದರಿಂದ ದೈಹಿಕವಾಗಿ ಶ್ರಮ ಇಲ್ಲದಂತಾಗಿ ಅನೇಕ ರೋಗರುಜಿನಗಳಿಗೆ ಸಹಜವಾಗಿ ತುತ್ತಾಗಬೇಕಾಗಿದೆ. ಆದರೆ ಇಂತಹ ರೋಗಗಳನ್ನು ಬಾರದಂತೆ ತಡೆಗಟ್ಟಲು ದಿನನಿತ್ಯ ಯೋಗಾಭ್ಯಾಸ ಮಾಡಿ ರೋಗವನ್ನು ದೂರವಿಡಬಹುದಾಗಿದೆ.
ನಾವು ಯಾವುದೇ ರೋಗ ಬಂದಾಗ ಅದರ ನಿವಾರಣೆಗೆ ಯೋಗಾಭ್ಯಾಸ, ವ್ಯಾಯಾಮಗಳನ್ನು ಮಾಡುವುದಕ್ಕಿಂತ ರೋಗವೇ ಬಾರದಂತೆ ದಿನನಿತ್ಯ ಇವುಗಳನ್ನು ರೂಢಿಸಿಕೊಳ್ಳಬೇಕು. ಯೋಗದ ಜೊತೆಗೆ ಸದಾ ಪ್ರೀತಿ ವಿಶ್ವಾಸದಿಂದ ಹೋದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಮೂಲಕ ಆರೋಗ್ಯಯುಕ್ತ ಸಮಾಜ ಹಾಗೂ ಉತ್ತಮ ವಾತಾವರಣ ನಿರ್ಮಿಸೋಣ ಎಂದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗೇಂದ್ರನಾಯ್ಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ, ಈಶ್ವರೀಯ ವಿಶ್ವವಿದ್ಯಾನಿಲಯದ ರಶ್ಮಿ, ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಜಿಲ್ಲಾ ಸಂಚಾಲಕರಾದ ಬಾಲಾಜಿ, ಪತಂಜಲಿ ಸಂಸ್ಥೆ ಮಲ್ಲಿಕಾರ್ಜುನಪ್ಪ, ಪತಂಜಲಿ ಯೋಗ ಮತ್ತು ಶಿಕ್ಷಣ ಸಂಸ್ಥೆಯ ಶ್ರೀನಿವಾಸ್, ಯೋಗ ಮುಖ್ಯಸ್ಥರಾದ ಚಿನ್ಮಯಾನಂದ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಆಯುಷ್ ಇಲಾಖೆ ಡಾ; ಗಿರೀಶ್ ಸ್ವಾಗತಿಸಿದರು. ಡಾ; ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ; ಅನಂತಶಯನ ನಿರೂಪಿಸಿದರು.
ಸಮಾರಂಭಕ್ಕೂ ಮೊದಲು ಬೆಳಗ್ಗೆ ೭ ರಿಂದ ೮ ಗಂಟೆಯವರೆಗೆ ಯೋಗಾಭ್ಯಾಸ ಮಾಡಲಾಯಿತು. ಯೋಗಾಭ್ಯಾಸದಲ್ಲಿ ಸಾವಿರಾರು ಯೋಗಪಟುಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಷಿ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು.