ಚಿತ್ರದುರ್ಗ: ಪ್ರತಿಯೊಬ್ಬರು ಆರೋಗ್ಯವಾಗಿರಬೇಕಾದರೆ ದೇಹದ ಎಲ್ಲಾ ಅಂಗಾಂಗಗಳು ಬಹಳ ಮುಖ್ಯ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಸ್.ಎಂ.ಜೋಶಿ ತಿಳಿಸಿದರು.

ಚಿನ್ಮುಲಾದ್ರಿ ರೋಟರಿ ಕ್ಲಬ್ ಚಿತ್ರದುರ್ಗ, ಬಸವೇಶ್ವರ ದಂತ ವೈದ್ಯಕೀಯ ಕಾಲೇಜು ಇವರುಗಳ ಸಹಯೋಗದೊಂದಿಗೆ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರಿಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಆಹಾರದ ರುಚಿಯನ್ನು ಸವಿಯಬೇಕಾದರೆ ದಂತಗಳು ಗಟ್ಟಿಮುಟ್ಟಾಗಿರಬೇಕು. ದಂತಾಚರಣೆ ಎನ್ನುವುದು ಕೇವಲ ಪೊಲೀಸ್ ಸಿಬ್ಬಂದಿಗಾಗಿ ಇರಬಾರದು ಸಾರ್ವಜನಿಕರು ತಮ್ಮ ದಂತಗಳನ್ನು ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಿರಬೇಕು ಎಂದು ಕರೆ ನೀಡಿದರು.

ಹೆಚ್ಚುವರಿ ರಕ್ಷಣಾಧಿಕಾರಿ ಆರ್.ಎಲ್.ಅರಸಿದ್ದಿ ಮಾತನಾಡುತ್ತ ಆರೋಗ್ಯಕ್ಕೆ ದಂತ ಎಷ್ಟು ಮುಖ್ಯವೋ ಅದೇ ರೀತಿ ದೇಹದ ಪ್ರತಿಯೊಂದು ಅಂಗಗಳನ್ನು ಸದೃಢವಾಗಿಟ್ಟುಕೊಳ್ಳಬೇಕು. ಒತ್ತಡದ ನಡುವೆ ಕೆಲಸ ಮಾಡುವ ಪೊಲೀಸರಿಗೆ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಜಾಸ್ತಿಯಾಗುತ್ತಿದೆ. ಪೊಲೀಸರು ಮತ್ತು ಅವರ ಕುಟುಂಬ ವರ್ಗದವರಿಗೆ ಬಸವೇಶ್ವರ ಆಸ್ಪತ್ರೆಯಿಂದ ಮೂರು ತಿಂಗಳಿಗೊಮ್ಮೆಯೋ ಇಲ್ಲ ಆರು ತಿಂಗಳಿಗಾದರೂ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಮನವಿ ಮಾಡಿದರು.

ಚಿನ್ಮುಲಾದ್ರಿ ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷ ಈ.ಚಿತ್ರಶೇಖರ್ ಮಾತನಾಡಿ ಸಮಾಜವನ್ನು ರಕ್ಷಿಸುವ ಪೊಲೀಸರು ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು. ದಂತ ದಿನಾಚರಣೆ ಅಂಗವಾಗಿ ಉಚಿತ ದಂತ ತಪಾಸಣಾ ಶಿಬಿರ ನಡೆಸುವುದಾಗಿ ಕೇಳಿಕೊಂಡಾಗ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಪಂದಿಸಿದರೆಂದು ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವ ಪ್ರಯತ್ನ ಮಾಡುತ್ತೇನೆಂದು ಹೇಳಿದರು.
ಡೆಂಟಲ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಚಿನ್ಮುಲಾದ್ರಿ ರೋಟರಿ ಕ್ಲಬ್ ಚಿತ್ರದುರ್ಗ ಕಾರ್ಯದರ್ಶಿ ಗೌರಮ್ಮ, ಡಿ.ವೈ.ಎಸ್ಪಿ. ತಿಪ್ಪೇಸ್ವಾಮಿ, ಗಾಯತ್ರಿ ಶಿವರಾಂ, ಅರುಣ್‌ಕುಮಾರ್, ಚಿನ್ಮುಲಾದ್ರಿ ರೋಟರಿ ಕ್ಲಬ್ ಪಿ.ಆರ್.ಓ. ನಾಗರಾಜ್ ಸಂಗಂ ಈ ಸಂದರ್ಭದಲ್ಲಿ ಹಾಜರಿದ್ದರು.
ಪೊಲೀಸರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ದಂತ ಸಮಸ್ಯೆಗಳನ್ನು ಗುಣಪಡಿಸುವ ಔಷಧಿಗಳನ್ನು ವಿತರಿಸಲಾಯಿತು.