ಚಿತ್ರದುರ್ಗ: ದಿನಾಂಕ:01-01-2004 ರಿಂದ ಕೇಂದ್ರ ಸರಕಾರಿ ನೌಕರರಿಗೆ ಹಾಗೂ 01-04-2006 ರಿಂದ ರಾಜ್ಯ ಸರ್ಕಾರಿ ನೌಕರರಿಗೆ ನಿಗಧಿತ ಪಿಂಚಣಿಯನ್ನು ರದ್ದುಪಡಿಸಿ ಅದರ ಬದಲು ನೂತನ ಪಿಂಚಣಿ ಯೋಜನೆ ಎಂಬ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿ ತರಲಾಗಿದೆ ಇದನ್ನು ವಿರೋಧಿಸಿ ಅ. 3 ರಂದು ನಗರದಲ್ಲಿ ಜಾಥಾ, ಮನವಿ ಸಮರ್ಪಣೆ ಮತ್ತು ರಕ್ತವನ್ನು ಸರ್ಕಾರಕ್ಕೆ ದಾನ ಮಾಡುವುದರ ಮೂಲಕ ಎಲ್ಲರಿಗೂ ಪಿಂಚಣಿಯನ್ನು ನೀಡುವಂತೆ ಒತ್ತಾಯಿಸಲಾಗುವುದು ಎಂದು ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಎಸ್.ಆರ್.ಲೇಪಾಕ್ಷ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಕಾರ ನೀಡುವ ಪಿಂಚಣಿ ಸೌಲಭ್ಯದಿಂದಾಗಿ ಇಳಿವಯಸ್ಸಿನಲ್ಲಿ ಗೌರವಯುತ ಬಾಳುವೆ ನಡೆಸಬಹುದೆಂಬ ಅಶಾಭಾವನೆಯು ಯುವ ಜನಾಂಗವನ್ನು ಸರ್ಕಾರಿ ನೌಕರಿಯ ಕಡೆ ಆಕರ್ಷಿಸುತ್ತಿತ್ತು. ಇಂದು ಸರ್ಕಾರಿ ನೌಕರಿ ಸೇರುವವರಿಗೆ ಪಿಂಚಣಿ ಇಲ್ಲ ಎಂಬ ಕಹಿ ಸತ್ಯ ನಮ್ಮ ಮುಂದಿದೆ ಎಂದರು.

ಈ ವಂತಿಗೆ ಆಧಾರಿತ ಆಧಾರಿತ ಪಿಂಚಣಿ ಯೋಜನೆಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅನೇಕ ನೌಕರರು ಈಗಾಗಲೇ ಮರಣ ಹೊಂದಿದ್ದು ಅವರ ಕುಟುಂಬಗಳು ಕಷ್ಟದ ಪರಿಸ್ಥಿತಿಗೆ ದೂಡಲ್ಪಟ್ಟಿರುವುದು ವಿಷಾದನೀಯ ಸಂಗತಿ. ಈ ಅವೈಜ್ಞಾನಿಕ ರಾಷ್ಟ್ರೀಯ ಪಿಂಚಣಿಯನ್ನು ವಿರೋಧಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘವು ಕಳೆದ 3 ವರ್ಷಗಳಿಂದ ರಾಜ್ಯಾಧ್ಯಂತ ನೌಕರರಲ್ಲಿ ಜಾಗೃತಿ ಮೂಡಿಸಲು ಸಾಧಕ-ಬಾಧಕಗಳ ಕುರಿತು ವಿಚಾರ ಸಂಕೀರ್ಣಗಳನ್ನು ಮತ್ತು ಕಾರ್ಯಾಗಾರಗಳನ್ನು ನಡೆÀಸಿ ನೌಕರರನ್ನು ಈ ಯೋಜನೆಯ ವಿರುದ್ಧ ಹೋರಾಟ ಮಾಡುವ ಗಟ್ಟಿತನವನ್ನು ಮೂಡಿಸಲಾಗಿದೆ ಎಂದರು.

ಈ ಯೋಜನೆಯನ್ನು ವಿರೋಧಿಸಿ ಪತ್ರ ಚಳುವಳಿ, ಮಾನ್ಯ ಪ್ರಧಾನಮಂತ್ರಿಗಳಿಗೆ, ಮಾನ್ಯ ಮುಖ್ಯಮಂತ್ರಿಗಳಿಗೆ, ಶಾಸಕರಿಗೆ, ಸಂಸದರಿಗೆ ಮನವಿ ಅರ್ಪಣೆ, ನಿಶ್ಚಿತ ಪಿಂಚಣಿ ನಮ್ಮ ಹಕ್ಕು ದಿನ, ಕರಾಳ ದಿನಾಚರಣೆ,ಪ್ರತಿಭಟನಾ ಸಭೆ ಹಾಗೂ ರ್ಯಾಲಿಗಳನ್ನು ಆಯೋಜಿಸುವ ಮೂಲಕ ಓPS ಯೋಜನೆಯನ್ನು ರದ್ದುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಡಿ.ಸಿ.ಆರ್.ಜಿ ಮತ್ತು ಕುಟುಂಬ ಪಿಂಚಣಿಯನ್ನು ದಿನಾಂಕ:01-04-2018ರಂದು ನೀಡಿದೆ ಆದರೆ ಇದು 01-04-2006ರಿಂದ ಸರ್ಕಾರ ನೀಡಬೇಕಾಗಿದೆ ಎಂದು ತಿಳಿಸಿದರು.

ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಈ ಹೋರಾಟವು ದೇಶದಲ್ಲಿಯೆ ವಿನೂತನ ರೀತಿಯ ಪ್ರತಿಭಟನೆಯಾಗಿದ್ದು, ದಿನಾಂಕ:03-10-2018ರಂದು ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ರಕ್ತದಾನ ನೀಡುವ ಮೂಲಕ ಎನ್.ಪಿ.ಎಸ್ ರದ್ದುಗೊಳಿಸಲು ಸರ್ಕಾರಕ್ಕೆ ತಿಳಿಸುವ ಕಾರ್ಯಕ್ರಮ ಇದಾಗಿದ್ದು, ಕೂಡಲೇ ಸರ್ಕಾರವು ಹಳೆ ಪಿಂಚಣಿ ನೀಡಬೇಕೆಂದು ಆಗ್ರಹಿಸಿದ್ದು,ಅ. 3 ರಂದು ಜಿಲ್ಲಾಧಿಕಾರಿಗಳ ಆವರಣದಿಂದ ಜಾಥಾ ಮೂಲಕ ಐ.ಎಂ.ಎ ಹಾಲ್‍ನಲ್ಲಿ ಸರ್ಕಾರಿ ನೌಕರರು ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು.ಲೇಪಾಕ್ಷ ಮನವಿ ಮಾಡಿದ್ದು ಹೆಚ್ಚಿನ ಮಾಹಿತಿಗಾಗಿ : 8884401244, 8277366419, ಸಂಪರ್ಕ ಮಾಡಲು ಕೋರಲಾಗಿದೆ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ.ಸಿ, ತಾಲ್ಲೂಕು ಅಧ್ಯಕ್ಷರಾದ ಲಿಂಗರಾಜ ಎಸ್ ಇಟಗಿ, ತಾಲ್ಲೂಕು ಕಾರ್ಯದರ್ಶಿ ಜಿ.ಆರ್.ಸಿದ್ದಪ್ಪ ಪಾಟೀಲ್, ಖಜಾಂಚಿ ಶಿವಣ್ಣ.ಟಿ, ಜಿಲ್ಲಾ ಸಂಚಾಲಕ ಕೃಷ್ಣಮೂರ್ತಿ.ಟಿ, ಆಂತರಿಕ ಲೆಕ್ಕಪರಿಶೋಧಕ ಕಲ್ಲೇಶ್.ಓ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಮತ, ಜಿಲ್ಲಾ ಜಂಟಿ ಕಾರ್ಯದರ್ಶಿ ಅನಿಲ.ಎಂ, ತಾಲ್ಲೂಕು ಉಪಾಧ್ಯಕ್ಷ ವಿನಯ್ ಇತರರು ಉಪಸ್ಥಿತರಿದ್ದರು.