ಬಳ್ಳಾರಿ: ನಿಷ್ಕ್ರಿಯ ಹಾಗೂ ನಿದ್ರೆಯಲ್ಲಿರುವ ಸರ್ಕಾರವನ್ನು ಎಚ್ಚರಿಸಲು ಮತ್ತು ಸಂಕಷ್ಟದಲ್ಲಿರುವ ರೈತರಲ್ಲಿ ವಿಶ್ವಾಸ ಮೂಡಿಸಲು ಇದೇ ಅ.೧ರಿಂದ ೧೧ರವರೆಗೆ ಬಳ್ಳಾರಿಯಿಂದ ನರಗುಂದದವರೆಗೆ ರೈತ ಚೈತನ್ಯ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವರು, ಯಾತ್ರೆಯ ಸಂಘಟಕರೂ ಆಗಿರುವ ಸಿ.ಟಿ.ರವಿ ಹೇಳಿದ್ದಾರೆ.
ಶ್ರೀ ವಾಲ್ಮೀಕಿ ಸರ್ಕಲ್ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ10-30ಕ್ಕೆ ಯಾತ್ರೆ ಉದ್ಘಾಟನೆ ಆಗಲಿದೆ. ರೈತರ ೨ ಲಕ್ಷ ರೂ.ವರೆಗಿನ ಎಲ್ಲ ಸಾಲ ಮನ್ನಾ ಮಾಡಬೇಕು. ಎಲ್ಲ ರೈತರಿಗೆ ಹೊಸ ಸಾಲ ನೀಡಬೇಕು. ಬೋರ್‌ವೆಲ್ ವಿಫಲವಾಗಿರುವ ರೈತರಿಗೆ ಪರಿಹಾರ ನೀಡಬೇಕು. ಆತ್ಮಹತ್ಯೆಗೆ ಶರಣಾದ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು. ಕೃಷಿ ಪಂಪ್‌ಸೆಟ್‌ಗೆ ನಿರಂತರ ವಿದ್ಯುತ್ ಪೂರೈಸಬೇಕು. ಹಾಲಿನ ದರ ಹೆಚ್ಚಳ ಮಾಡಿ, ಹಾಲು ಸಂಗ್ರಹಣೆ ರಜಾ ದಿನ ರದ್ದುಪಡಿಸಬೇಕು. ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮಗೊಳಿಸಬೇಕು, ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆ ತ್ವರಿತಗೊಳಿಸಬೇಕು, ಪ್ರಕೃತಿ ವಿಕೋಪ ಮತ್ತು ಬರ ಪರಿಸ್ಥಿತಿಯಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವಂತೆ ಯಾತ್ರೆಯುದ್ದಕ್ಕೂ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು.
ಯಾತ್ರೆಯಲ್ಲಿ ಒಟ್ಟು ೩ ತಂಡಗಳನ್ನು ಮಾಡಲಾಗಿದೆ. ಮೊದಲ ತಂಡದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವರು, ಹಾಲಿ ಸಂಸದ ಬಿ.ಶ್ರೀರಾಮುಲು ಇದರ ನೇತೃತ್ವ ವಹಿಸುವರು. ೨ನೇ ತಂಡದಲ್ಲಿ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ, ೩ನೇ ತಂಡದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗಧೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಶೆಟ್ಟರ್ ಯಾತ್ರೆಯ ನೇತೃತ್ವ ವಹಿಸುವರು.
ಈಗಾಗಲೇ ಆ.೩೧ರಿಂದ ಸೆ.೧೩ರವರೆಗೆ ಹಾವೇರಿಯಿಂದ ಮೈಸೂರು ವರೆಗೆ ಪ್ರಥಮ ಚೈತನ್ಯ ಯಾತ್ರೆ ಪೂರೈಸಿದ್ದೇವೆ. ರಾಜ್ಯದಾದ್ಯಂತ ಜನತೆ ಯಾತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ೧೩೫ ತಾಲೂಕುಗಳು ಬರಪೀಡಿತ ಜಿಲ್ಲೆಗಳೆಂದು ಘೋಷಣೆಯಾಗಿದ್ದರೂ, ಶಾಸಕರಾಗಲಿ ಸಚಿವರಾಗಲಿ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೆತ್ತಿಕೊಳ್ಳುತ್ತಿಲ್ಲ. ಮಹದಾಯಿ ಯೋಜನೆ, ಎತ್ತಿನ ಹೊಳೆ ನೀರಾವರಿ ಯೋಜನೆ ಜಾರಿಗೊಳಿಸಲು ತಕ್ಷಣವೇ  ಅಧಿವೇಶನ ಕರೆಯಬೇಕು ಎಂದರು.
ಸಂಸದ ಬಿ.ಶ್ರೀರಾಮುಲು, ಕೆಎಂಎಫ್ ರಾಜ್ಯಾಧ್ಯಕ್ಷರಾಗಿದ್ದ ಜಿ.ಸೋಮಶೇಖರ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಬಿಜೆಪಿ ಜಿಲ್ಲಾಧ್ಯಕ್ಷ ನೇಮಿರಾಜ ನಾಯ್ಕ, ಬಿಜೆಪಿ ಮುಖಂಡರಾದ ಓಬಳೇಶ್, ಕೆಎ ರಾಮಲಿಂಗಪ್ಪ, ಎಸ್ ಗುರುಲಿಂಗನಗೌಡ, ಗುತ್ತಿಗನೂರು ವಿರೂಪಾಕ್ಷಗೌಡ, ಗೋನಾಳ್ ಎಂ ರಾಜಶೇಖರಗೌಡ, ಮುರಹರಿಗೌಡ, ನೂರ್, ಕೆ ಬಸವರಾಜ, ಎಎಂ ಸಂಜಯ್, ಶಿವಾಕೃಷ್ಣಾ, ಸುಗುಣ, ಬಿ.ಬಾಲರಾಜು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.