ಚಿತ್ರದುರ್ಗ: ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ನಡೆಸಿದ ಫಲವಾಗಿ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಚಿತ್ರದುರ್ಗದಲ್ಲಿ ಮೂರು ಹಾಸ್ಟೆಲ್‌ಗಳನ್ನು ನೀಡಿರುವುದು ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ ಪಕ್ಷ ಇನ್ನು ಏಳೆಂಟು ಹಾಸ್ಟೆಲ್‌ಗಳನ್ನು ಚಿತ್ರದುರ್ಗ ನಗರದಲ್ಲಿ ತೆರೆದು ಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷರು ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಮಹಲಿಂಗಪ್ಪ ಒತ್ತಾಯಿಸಿದರು.

ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ರೀಡಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಲೆಮಾರಿ ಜನಾಂಗದ ವಿದ್ಯಾರ್ಥಿಗಳು ಹಾಗೂ ಜನಾಂಗ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದಿದೆ. ಇಂತಹ ನಿಕೃಷ್ಠ ಸ್ಥಿತಿಯಲ್ಲಿರುವ ಜನಾಂಗದ ಅಭಿವೃದ್ದಿಗೆ ಸಹಾಯ ಮಾಡಬೇಕೆಂಬ ಅರಿವು ಚುನಾಯಿತ ಪ್ರತಿನಿಧಿಗಳಿಗಿಲ್ಲ. ಅಧಿಕಾರಿಗಳಿಗೆ ಮನಸ್ಸಿದ್ದರೂ ರಾಜಕಾರಣಿಗಳು ಸಹಕರಿಸುತ್ತಿಲ್ಲ. ಇದರಿಂದ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಮೂಲಭೂತ ಸೌಕರ್ಯಗಳ ಹೆಸರಿನಲ್ಲಿ ಕೋಟ್ಯಾಂತರ ರೂ.ಗಳನ್ನು ಕೊಳ್ಳೆ ಹೊಡೆಯುವ ಬದಲು ಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ಕೊಡಲಿ ವರ್ಷಾನುಗಟ್ಟಲೆ ಹೋರಾಟ ನಡೆಸಿದ ಕಾರಣಕ್ಕಾಗಿ ಕೇವಲ ಮೂರು ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ ಇದು ಸಾಕಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್.ಸಿ., ಎಸ್.ಟಿ.ಜನಾಂಗದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲಾ ರೀತಿಯ ಸೌಲಭ್ಯಗಳನ್ನು ಹಿಂದಿನಿಂದಲೂ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಕ್ರಮೇಣ ಎಲ್ಲವೂ ಮೊಟಕುಗೊಳ್ಳುತ್ತಿವೆ. ಆದ್ದರಿಂದ ಮೊದಲಿನ ರೀತಿಯಲ್ಲಿಯೇ ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಬಿ.ಸಿ.ಎಂ.ಇಲಾಖೆಯ ತಾಲೂಕು ವಿಸ್ತೀರ್ಣಾಧಿಕಾರಿ ಎನ್.ರಾಜಣ್ಣ, ಲೆಕ್ಕಾಧಿಕಾರಿ ರೇಣುಕಮ್ಮ, ಹಾಸ್ಟೆಲ್ ವಾರ್ಡ್‌ನ್‌ಗಳಾದ ದಿವಾಕರರೆಡ್ಡಿ, ರುದ್ರಮುನಿ, ವೀರಭದ್ರಪ್ಪ, ಸುವರ್ಣಮ್ಮ, ನಿವೃತ್ತ ನಿಲಯ ಪಾಲಕಿ ಕಣುಮಕ್ಕ, ಜಗದೀಶ್, ನರಸಿಂಹಮುನಿ ಈ ಸಂದರ್ಭದಲ್ಲಿ ಹಾಜರಿದ್ದರು.

ಅಲೆಮಾರಿ ವಿದ್ಯಾರ್ಥಿಗಳಾದ ಎಲ್.ನಾಗರಾಜ್, ಶರತ್, ಹೆಚ್.ನಾಗರಾಜ್, ದಯಾನಂದ್, ಜಂಪಣ್ಣ, ಶಿವಲಿಂಗ, ಚಿತ್ತರಂಜನ್, ವಿಜಯ, ಅನಿತ, ಪವಿತ್ರ, ಕುಮಾರ್, ಚಿದಾನಂದ, ಸೌಮ್ಯ, ರಂಜಿತ ಅಭಿನಂದನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.