ಚಿತ್ರದುರ್ಗ: ಅಮೃತ್‍ಸಿಟಿ ಯೋಜನೆಯಡಿಯಲ್ಲಿ ಚಿತ್ರದುರ್ಗ ನಗರದಲ್ಲಿ ವಿವಿಧ ಪಾಕ್‍ಗಳ ಅಭಿವೃದ್ದಿಗಾಗಿ ಮೂರು ಕೋಟಿ ರೂ.ಗಳು ಬಿಡುಗಡೆಯಾಗಿರುವುದರಿಂದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಶನಿವಾರ ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕಿಗೆ ಭೇಟಿ ನೀಡಿ ಸುತ್ತಲೂ ಗೋಡೆ ನಿರ್ಮಾಣ ಕಳೆಪೆಯಾಗಿರುವುದರಿಂದ ಇಂಜಿನಿಯರ್‍ಗಳನ್ನು ತೀವ್ರ ತರಾಟೆ ತೆಗೆದುಕೊಂಡರು.

73 ಲಕ್ಷ ರೂ.ವೆಚ್ಚದಲ್ಲಿ ಯೂನಿಯನ್ ಪಾರ್ಕ್‍ನಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕರು ನಿಯಮದಂತೆ ನಿಗಧಿತ ಪ್ರಮಾಣದ ಗಾತ್ರವಿಲ್ಲದ ಸೈಜುಗಲ್ಲುಗಳನ್ನು ಬಳಸಿ ಕಾಂಪೌಂಡ್ ನಿರ್ಮಿಸುತ್ತಿರುವುದನ್ನು ವೀಕ್ಷಿಸಿ ಅಸಮಾಧಾನಗೊಂಡು ಅಲ್ಲಲ್ಲಿ ಕಾಂಪೌಂಡ್‍ನ ಸೈಜುಗಲ್ಲುಗಳನ್ನು ಕೀಳಿಸಿ ಕಳೆಪೆಯಾಗಿರುವುದನ್ನು ಖಾತ್ರಿಪಡಿಸಿಕೊಂಡು ಇಂತಹ ಬೇಕಾಬಿಟ್ಟಿ ಕೆಲಸ ಮಾಡಿದರೆ ನಾನು ಸಹಿಸುವುದಿಲ್ಲ. ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕೆಳಗೋಟೆ ಸಿ.ಕೆ.ಪುರ ಪಾರ್ಕಿಗೆ 50 ಲಕ್ಷ ರೂ., ರಾಜೇಂದ್ರನಗರ ಪಾರ್ಕಿಗೆ 50 ಲಕ್ಷ., ಐ.ಯು.ಡಿ.ಪಿ.ಲೇಔಟ್ ಪಾರ್ಕಿಗೆ 77 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಹೆಚ್ಚಿನ ಹಣ ಬೇಕಾದರೆ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ನಗರಸಭೆ ಅನುದಾನವನ್ನು ಬಳಸಿಕೊಂಡುನಗರದಲ್ಲಿನ ಪಾರ್ಕ್‍ಗಳನ್ನು ವಿಶಾಲವಾಗಿ ನಿರ್ಮಾಣ ಮಾಡಿ ಹಸಿರಿನಿಂದ ಕಂಗೊಳಿಸುವಂತೆ ಮಾಡಿದರೆ ಮಹಿಳೆ ಮಕ್ಕಳು ಹಾಗೂ ವಯೋವೃದ್ದರು ಸಂಜೆ ವೇಳೆ ವಿಹರಿಸಲು ಅನುಕೂಲವಾಗಲಿದೆ. ಅದಕ್ಕಾಗಿ ಯೂನಿಯನ್ ಪಾರ್ಕ್‍ಗೆ ಸುಂದರ ರೂಪ ಕೊಡಬೇಕಾಗಿದೆ. ಎಲ್ಲಿಯೂ ಕಳಪೆಯಾಗಬಾರದು ಎಂದು ಇಂಜಿನಿಯರ್‍ಗಳಿಗೆ ತಾಕೀತು ಮಾಡಿದರು.

ನಗರಸಭೆ ಪೌರಾಯುಕ್ತ ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಶಂಕರ್, ಸಹಾಯಕ ಇಂಜಿನಿಯರ್ ಕೃಷ್ಣಮೂರ್ತಿ, ಕೆ.ಯು.ಡಬ್ಲ್ಯು. ಎಸ್. ಹಾಗೂ ಪಿ.ಡಿ.ಎಂ.ಸಿ.ಇಂಜಿನಿಯರ್‍ಗಳು ಹಾಗೂ ಕಂಟ್ರಾಕ್ಟರ್ ವಿಜಯಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.