ಚಿತ್ರದುರ್ಗ : ಬಹಳಷ್ಟು ಜನರು ಅಮಾವಾಸ್ಯೆಗೆ ಹೆದರುತ್ತಾರೆ. ಆದರೆ ಬಸವಾದಿ ಶರಣರು ಅಮಾವಾಸ್ಯೆಯನ್ನು ಹೆದರಿಸುತ್ತಾರೆ. ರಾಹುಕಾಲ, ಯಮಗಂಡ ಕಾಲ, ಗುಳಿಕ ಕಾಲ ಏನು ಮಾಡಲಾರವು. ಈ ಹಗಲು ರಾತ್ರಿಗಳು ನಿಸರ್ಗದ ನಿಯಮಗಳು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಇಪ್ಪತ್ತೊಂಬತ್ತನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಮಠಕ್ಕೆ ವಿದ್ಯಾರ್ಥಿಗಳಾಗಿ ಬಂದು ವಿದ್ಯಾರ್ಜನೆ ಮಾಡಿ ಅಲ್ಲಲ್ಲಿ ಹುದ್ದೆಗಳನ್ನು ಪಡೆದು ಶ್ರೀಮಠದ ಜೊತೆಯಲ್ಲಿ ಸಾಗುತ್ತ ಬಂದಿರುವ ಯುವಕರೂ ಸೇರಿದಂತೆ ಹಲವರು ಪ್ರಥಮ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಿತ್ರದುರ್ಗ ಇಂದು ಬರದ ನಾಡಾಗಿದೆ. ಸಮರ್ಪಕ ಮಳೆಯಾಗುತ್ತಿಲ್ಲ. ಅಂತರ್ಜಲ ಪಾತಾಳಕ್ಕೆ ಹೋಗಿದೆ. ನೀರಾವರಿಗಾಗಿ ಹೋರಾಟವನ್ನು ನಡೆಸಲಾಗುತ್ತಿದೆ. ಇಂತಹ ಬರದ ನಾಡಿಗೆ ಈ ಸರಳ ಸಾಮೂಹಿಕ ಮಹೋತ್ಸವ ಒಂದು ವರದಾನವಾಗಿದೆ. ಮುರಿಗೆ ಶಾಂತವೀರ ಸ್ವಾಮಿಗಳು ಇಲ್ಲಿ ನೆಲೆಸಿದ ಮೇಲೆ ಈ ಬರದನಾಡು ಭಕ್ತಿಯ ನಾಡಾಗಿದೆ. ಈ ಬಾರಿ ಅಮಾವಾಸ್ಯೆ ಮತ್ತು ಯುಗಾದಿ ಬಂದಿರುವುದರಿಂದ ವಿವಾಹ ಜೋಡಿಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ 29 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮಾವಾಸ್ಯೆ ಮತ್ತು ಯುಗಾದಿ ಒಟ್ಟೊಟ್ಟಿಗೆ ಬಂದಿವೆ. ಇಲ್ಲಿಯವರೆಗೂ 16 ಸಾವಿರಕ್ಕು ಹೆಚ್ಚು ಜೋಡಿಗಳು ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮದುವೆಗೆ ಆಗಮಿಸಿರುವ ನೀವೆಲ್ಲ ಕಾಯಕ ಮಾಡಬೇಕು. ಹಸಿದವನಿಗೆ ಅನ್ನ ಬೇಕು. ಅನ್ನಕ್ಕಾಗಿ ಕಾಯಕ ಮಾಡಬೇಕು. ಅಬಿವೃದ್ಧಿ ಮತ್ತು ಆಧ್ಯಾತ್ಮ ಜೊತೆ ಜೊತೆಯಾಗಿ ಸಾಗಬೇಕು. ಅಭಿವೃದ್ಧಿಯ ಕಡೆಗೆ ಕರೆದೊಯ್ಯುವುದೇ ಕಲ್ಯಾಣ ಮಾರ್ಗ. ಎಲ್ಲರೂ ತಪ್ಪದೇ ಮತ ಚಲಾಯಿಸಿ. ಹಣಕ್ಕಾಗಿ ಓಟು ಮಾರಿಕೊಳ್ಳಬಾರದು ಎಂದರು.

ಮೇದಾರ ಗುರುಪೀಠದ ಶ್ರೀ ಬಸವ ಇಮ್ಮಡಿಮೇದಾರ ಕೇತೇಶ್ವರ ಸ್ವಾಮೀಜಿ ವೇದಿಕೆಯಲ್ಲಿದ್ದರು. ಎಸ್.ಜೆ.ಎಂ. ವಿದ್ಯಾಪೀಠ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಎನ್. ತಿಪ್ಪಣ್ಣ ಮುಂತಾದವರಿದ್ದರು.
ಬಸರಾಜ ಕಟ್ಟಿ ಸ್ವಾಗತಿಸಿದರು. ಪ್ರದೀಪ್‍ಕುಮಾರ್ ನಿರೂಪಿಸಿದರು.