ಚಿತ್ರದುರ್ಗ: ಪ್ರಸಕ್ತ ಲೋಕಸಭಾ ಚುನಾವಣೆ ನಿಮಿತ್ಯ ಅಭ್ಯರ್ಥಿಯ ಗಮನಕ್ಕೆ ತಾರದೆ, ಅಥವಾ ಅಭ್ಯರ್ಥಿಯ ಪೂರ್ವಾನುಮತಿ ಇಲ್ಲದೆ ಮೂರನೆ ವ್ಯಕ್ತಿ ಅಥವಾ ಅನ್ಯರು ಯಾವುದೇ ಮಾಧ್ಯಮಗಳಲ್ಲಿ ಜಾಹೀರಾತು ನೀಡುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮ ಪ್ರಮಾಣೀಕರಣ ಮತ್ತು ಮಾಧ್ಯಮ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಪರ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಗೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಜಾಹೀರಾತುಗಳು ಅಭ್ಯರ್ಥಿಯ ಪರವಾಗಿ ಅನ್ಯರು ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಯಾವುದೇ ಮುದ್ರಣ ಮಾಧ್ಯಮಗಳು ಜಾಹೀರಾತು ಪ್ರಕಟಿಸುವ ಮುನ್ನ, ಜಾಹೀರಾತು ನೀಡುತ್ತಿರುವವರು, ಸಂಬಂಧಪಟ್ಟ ಪಕ್ಷ ಅಥವಾ ಅಭ್ಯರ್ಥಿಯ ಪೂರ್ವಾನುಮತಿ ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲಿಸಿದ ಬಳಿಕವೇ ಪ್ರಕಟಿಸಬೇಕೆಂದರು.

ಜಾಹೀರಾತು ನೀಡುತ್ತಿರುವವರ ಹೆಸರು, ವಿಳಾಸ ಸೇರಿದಂತೆ ಸಮಗ್ರ ವಿವರವನ್ನು ಪಡೆದಿರಬೇಕು. ಅಲ್ಲದೆ ಚುನಾವಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಕೋರಿದ ಸಂದರ್ಭದಲ್ಲಿ ಎಲ್ಲ ವಿವರ ನೀಡಬೇಕು. ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ನೀಡ ಬಯಸುವವರು ಎಂಸಿಎಂಸಿ ಸಮಿತಿಯಿಂದ ಜಾಹೀರಾತಿಗೆ ಪ್ರಮಾಣೀಕರಣ ಪಡೆಯುವ ಅಗತ್ಯ ಇಲ್ಲವಾದರೂ, ಜಾಹೀರಾತನ್ನು ನೀಡಲು ಅಭ್ಯರ್ಥಿಯ ಒಪ್ಪಿಗೆ ಇದೆಯೇ, ಯಾವ ಯಾವ ಪತ್ರಿಕೆಗಳು ಅಥವಾ ಮಾಧ್ಯಮಗಳಿಗೆ ಜಾಹೀರಾತು ನೀಡಲಾಗುತ್ತಿದೆ, ಇದರ ವೆಚ್ಚ ಎಷ್ಟು ಎಂಬುದರ ಮಾಹಿತಿಯನ್ನು ಎಂಸಿಎಂಸಿ ಸಮಿತಿಗೆ ಜಾಹೀರಾತು ಪ್ರಕಟಗೊಳ್ಳುವ ಮುನ್ನವೇ ತಪ್ಪದೆ ಸಲ್ಲಿಸಬೇಕು. ತಪ್ಪಿದಲ್ಲಿ ಅಂತಹ ಜಾಹೀರಾತುಗಳನ್ನು ಪೇಯ್ಡ್ ನ್ಯೂಸ್ ಎಂಬುದಾಗಿ ಪರಿಗಣಿಸಿ, ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಒಂದು ವೇಳೆ ಮೂರನೆ ವ್ಯಕ್ತಿ ಅಥವಾ ಅನ್ಯ ವ್ಯಕ್ತಿ, ಅಭ್ಯರ್ಥಿಯ ಪೂರ್ವಾನುಮತಿ ಪಡೆಯದೆ ಅಥವಾ ಅವರ ಗಮನಕ್ಕೆ ತಾರದೆ, ಜಾಹೀರಾತು ಪ್ರಕಟಪಡಿಸಿದಲ್ಲಿ ಪ್ರಜಾ ಪ್ರತಿನಿಧಿತ್ವ ಕಾಯ್ದೆ 171(ಹೆಚ್) ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಫ್ಲೆಕ್ಸ್‍ಗಳ ಮೂಲಕ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುವ ಸಂದರ್ಭದಲ್ಲಿಯೂ ಇದೇ ನಿಯಮವನ್ನು ಅನುಸರಿಸಬೇಕು. ಕರಪತ್ರಗಳನ್ನು ಮುದ್ರಿಸುವ ಸಂದರ್ಭದಲ್ಲಿ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಲ್ಲದೆ ಮುದ್ರಕರು ಅಪೆಂಡಿಕ್ಸ್-ಎ ಮತ್ತು ‘ಬಿ’ ನಲ್ಲಿ ವಿವರವನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಪಬ್ಲಿಷರ್ಸ್ ವಿರುದ್ಧ ಕ್ರಮ ಜರುಗಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮುನ್ನ ಎಂಸಿಎಂಸಿ ಸಮಿತಿಯಿಂದ ಕಡ್ಡಾಯವಾಗಿ ಪ್ರಮಾಣೀಕರಣ ಪತ್ರ ಪಡೆದಿರಬೇಕು. ಮೂರನೆ ವ್ಯಕ್ತಿ ಅಭ್ಯರ್ಥಿಯ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳುವ ಮುನ್ನ ಸಂಬಂಧಪಟ್ಟ ಅಭ್ಯರ್ಥಿಯಿಂದ ಪೂರ್ವಾನುಮತಿ ಪಡೆದಿರಬೇಕು ತಪ್ಪಿದಲ್ಲಿ ಅಂತಹವರ ವಿರುದ್ಧ ಪ್ರಜಾ ಪ್ರತಿನಿಧಿತ್ವ ಕಾಯ್ದೆ 171(ಹೆಚ್) ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಎಂಸಿಎಂಸಿ ಸಮಿತಿಯ ನೋಡಲ್ ಅಧಿಕಾರಿ ಎನ್.ಟಿ. ನೆಗಳೂರ್, ಸದಸ್ಯರುಗಳಾದ ಡಾ. ಕಾಂತರಾಜು, ವಾರ್ತಾಧಿಕಾರಿ ತುಕಾರಾಂರಾವ್, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ವೇದಮೂರ್ತಿ, ಸಾಮಾಜಿಕ ಜಾಲತಾಣಗಳ ನೋಡಲ್ ಅಧಿಕಾರಿ ಮುರಳಿಧರ್ ಉಪಸ್ಥಿತರಿದ್ದರು.